ಡ್ರಗ್ ವ್ಯಸನಿ ದಂಪತಿಯಿಂದ ಹಣಕ್ಕಾಗಿ ಮಕ್ಕಳ ಮಾರಾಟ
ಮುಂಬಯಿ: ಇನ್‌ಸ್ಪಕ್ಟರ್ ದಯಾ ನಾಯಕ್ ನೇತೃತ್ವದ ಪೊಲೀಸ್ ತಂಡ ಶಿಶು ಮಾರಾಟ ಜಾಲವೊಂದನ್ನು ಬಯಲಿಗೆಳೆದು ಮೂವರು ಆರೋಪಿಗಳನ್ನು ಬಂಧಿಸಿದೆ. ಡ್ರಗ್ ವ್ಯಸನಿ ತಂದೆ-ತಾಯಿ ಹಣಕ್ಕಾಗಿ ತಮ್ಮ ಮಗುವನ್ನೇ ಮಾರಿದ ಪ್ರಕರಣ ಇದಾಗಿದ್ದು, ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ.
ಶಬ್ಬೀರ್ ಮತ್ತು ಸಾನಿಯಾ ಖಾನ್ ಎಂಬ ದಂಪತಿ ತಮ್ಮ ಮಗುವನ್ನು 74,000 ರೂ. ಗೆ ಮಾರಾಟ ಮಾಡಿದ್ದರು. ಶಕೀಲ್ ಮಕ್ರಾನಿ ಎಂಬಾತ ಮಗುವನ್ನು ಖರೀದಿಸಿದ್ದ. ಈ ಮೂವರನ್ನು ಪೊಲೀಸರು ಬಂಧಿಸಿ ಒಂದು ತಿಂಗಳು ಪ್ರಾಯದ ಮಗುವನ್ನು ರಕ್ಷಿಸಿದ್ದಾರೆ. ಇನ್ನೊಂದು ಮಗುವಿಗಾಗಿ ಹುಡುಕಾಟ ನಡೆದಿದೆ. ಜತೆಗೆ ದಲ್ಲಾಳಿ ಉಷಾ ರಾಠೋಡ್ ಎಂಬಾಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಗು ನಾಪತ್ತೆ ಪ್ರಕರಣದ ತನಿಖೆ ನಡೆಸುವಾಗ ಕ್ರೈಂಬ್ರಾಂಚ್ ಘಟಕ 9ರ ಪೊಲೀಸರಿಗೆ ಶಿಶು ಮಾರಾಟ ಮಾಡುವ ದೊಡ್ಡ ಜಾಲವೊಂದರ ಸುಳಿವು ಸಿಕ್ಕಿತ್ತು. ಅಂಧೇರಿ ಸುತ್ತಮುತ್ತ ಈ ಜಾಲ ಸಕ್ರಿಯವಾಗಿದ್ದು, ಪೊಲೀಸರು ಹಲವೆಡೆಗೆ ದಾಳಿ ನಡೆಸಿದ್ದಾರೆ.
ಶಬ್ಬೀರ್ ಮತ್ತು ಸಾನಿಯಾ ತಮ್ಮ ಮಗುವನ್ನು ಮಾರಿದ ವಿಷಯವನ್ನು ಪೊಲೀಸರಿಗೆ ಶಬ್ಬೀರ್‌ನ ಸಹೋದರಿಯೇ ತಿಳಿಸಿದ್ದರು. ಕೆಲ ವರ್ಷ ಶಬ್ಬೀರ್ ದಂಪತಿ ಅಂಧೇರಿಯಲ್ಲಿ ಸಹೋದರಿಯ ಕುಟುಂಬದ ಜತೆಗೆ ಇದ್ದರು. ಗಂಡ-ಹೆಂಡತಿ ಇಬ್ಬರೂ ಡ್ರಗ್ ವ್ಯಸನಿಗಳಾದ ಕಾರಣ ಅವರ ಉಪಟಳ ತಾಳಲಾಗದೆ ಮನೆಯಿಂದ ಹೊರಹಾಕಿದ್ದರು. ಬಳಿಕ ಶಬ್ಬೀರ್ ಮತ್ತು ಸಾನಿಯಾ ಬೇರೆ ಬೇರೆ ಕಡೆ ವಾಸವಾಗಿದ್ದರು. ಕೆಲದಿನಗಳ ಹಿಂದೆ ವಾಪಸ್ ಬಂದು ಮನೆ ಬಾಡಿಗೆ ಕೊಡಲು ಕೂಡ ಹಣ ಇಲ್ಲ, ಸ್ವಲ್ಪ ದಿನ ಇರುತ್ತೇವೆ ಎಂದು ಹೇಳಿದ್ದರು. ಮಕ್ಕಳ ಬಗ್ಗೆ ವಿಚಾರಿಇದಾಗ ಏನೇನೂ ಸಬೂಬು ಹೇಳತೊಡಗಿದರು.ಕೊನೆಗೆ ಸಹೋದರಿ ಬಲವಂತಪಡಿಸಿದಾಗ ಮಗುವನ್ನು ಮಾರಿದ ವಿಷಯ ಬಾಯಿಬಿಟ್ಟಿದ್ದಾರೆ. ಡ್ರಗ್ ಖರೀದಿಸಲು ಹಣದ ಕೊರತೆಯಾದಾಗ ತಮ್ಮ ಮಕ್ಕಳನ್ನೇ ಮಾರಾಟ ಮಾಡಿದ್ದರು.






























































