ಕೌಡೂರು : ಹಾಡು ಹಗಲೇ ಚಿರತೆ ಹಾವಳಿ – ನಾಲ್ವರ ಮೇಲೆ ದಾಳಿ

ಕಾರ್ಕಳ : ಕೌಡೂರು ಪರಿಸರದಲ್ಲಿ ನಾಲ್ವರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಸಂಭವಿಸಿದೆ. ನ. 23 ರಂದು ಬೆಳಗ್ಗೆ ಸುಮಾರು 6-30ರ ವೇಳೆಗೆ ನಾಗಂಟೆಲ್‌ ಎಂಬಲ್ಲಿ ಮನೆಯೊಂದರ ನಾಯಿಯನ್ನು ಹಿಡಿಯಲು ಚಿರತೆ ಹೊಂಚು ಹಾಕಿ ದಾಳಿ ನಡೆಸಿತ್ತು. ಈ ವೇಳೆ ಮನೆಯ ಯಜಮಾನ ಸುಧೀರ್‌ ನಾಯ್ಕ್‌ ನಾಯಿಯನ್ನು ರಕ್ಷಿಸಲು ಮುಂದಾದ ವೇಳೆ ಚಿರತೆ ಅವರ ಮೇಲೆರಗಿದೆ. ಮುಖ ಹಾಗೂ ಕೈ ಗಾಯಗೊಳಿಸಿದೆ.

ವಾಹನ ಸವಾರರ ಮೇಲೆ ದಾಳಿ
ಇದೇ ಚಿರತೆ 11-30ರ ಸುಮಾರಿಗೆ ಬೈಕ್‌ನಲ್ಲಿ ಸಾಗುತ್ತಿದ್ದ ನಿಧೀಶ್‌ ಆಚಾರ್ಯ ಎಂಬವರಿಗೆ ಎದುರಾಗಿದೆ. ಹಸಿವೆಯಲ್ಲಿ ಕೋಪಗೊಂಡಿದ್ದ ಚಿರತೆ ನಿಧೀಶ್‌ ಅವರ ಮೇಲೆ ಹಾರಲು ಯತ್ನಿಸಿದ್ದು, ಅದೃಷ್ಟವಶಾತ್‌ ನಿಧೀಶ್‌ ಅಪಾಯದಿಂದ ಪಾರಾಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಸದಾನಂದ ಪುತ್ರನ್‌ ಅವರ ತಲೆ ಮೇಲೆ ಚಿರತೆ ಹಾರಿದ್ದು, ಹೆಲ್ಮೆಟ್‌ ಹಾಕಿಕೊಂಡಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಮಹಿಳೆಯ ಮೇಲೆ ದಾಳಿ
ಇಂದು (ನ. 24) ಬೆಳಗ್ಗೆ ಇದೇ ಪರಿಸರದಲ್ಲಿ ಜಯಂತಿ ನಾಯ್ಕ್‌ ಮತ್ತು ಮಲ್ಲಿಕಾ ನಾಯ್ಕ್‌ ಎಂಬವರು ಮೇವಿಗಾಗಿ ದನವನ್ನು ಕಟ್ಟಲು ಹೋದ ಸಂದರ್ಭ ಜಯಂತಿ ನಾಯ್ಕ್ ಅವರ ಮೇಲೆ ಚಿರತೆ ದಾಳಿ ಮಾಡಿದೆ. ಅವರ ಕೈಗಳಿಗೆ ತೀವ್ರವಾದ ಪರಚಿದ ಗಾಯಗಳಾಗಿದೆ.

ಆತಂಕದಲ್ಲಿ ಜನತೆ
ಕೌಡೂರು ಪರಿಸರದಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಮಿತಿ ಮೀರಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ರಾತ್ರಿ ಸಮಯದಲ್ಲಿ ಚಿರತೆ ನಾಯಿಗಳನ್ನು, ಕೋಳಿಗಳನ್ನು ಭೇಟೆಯಾಡುವುದು ಸಾಮಾನ್ಯವಾಗಿದೆ. ಆದರೆ, ಇದೀಗ ಹಾಡು ಹಗಲೇ ಈ ಪರಿಸರದಲ್ಲಿ ಚಿರತೆ ಕಾಣಸಿಗುತ್ತಿದ್ದು ಜಾನುವಾರುಗಳು ಮಾತ್ರವಲ್ಲದೆ ಜನರ ಮೇಲೆಯೂ ದಾಳಿ ಮಾಡುತ್ತಿರುವುದು ಸ್ಥಳೀಯರಲ್ಲಿ ಭಯಭೀತಗೊಳಿಸಿದೆ.

ದೂರು ನೀಡಲಾಗಿತ್ತು
ತಿಂಗಳ ಹಿಂದೆ ಚಿರತೆ ಹಾವಳಿ ಕುರಿತು ಸಂಬಂಧಪಟ್ಟ ಇಲಾಖೆಗೆ ಗ್ರಾಮಸ್ಥರಾದ ಕಿಶೋರ್‌ ಶೆಟ್ಟಿ ಮತ್ತು ರಂಜಿತ್‌ ಶೆಟ್ಟಿ ಕೌಡೂರು ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ್ದ ಅರಣ್ಯ ಇಲಾಖೆ ಗ್ರಾಮಸ್ಥರ ಬೇಡಿಕೆಯ ಮೇರೆಗೆ ಕೌಡೂರು ಮಾಣಿಕುಮೇರಿ ಬಳಿ ಬೋನ್ ಇರಿಸಲಾಗುವುದು ಎಂದು ಭರವಸೆ ನೀಡಿದ್ದರು.

ತಾಲೂಕಿನಲ್ಲಿ ಹೆಚ್ಚುತ್ತಿರುವ ಚಿರತೆ ಕಾಟ
ತಾಲೂಕಿನೆಲ್ಲೆಡೆ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಣೂರು, ಕಾರ್ಕಳ ಕಾಳಿಕಾಂಬಾ ಪರಿಸರ, ಕಣಜಾರು, ಪಳ್ಳಿ, ನೀರೆ ಬೈಲೂರು, ಕಾಂತಾವರ, ಬೆಳ್ಮಣ್‌, ಮುಡಾರು, ಮುಂಡ್ಲಿ, ಹೆಬ್ರಿ ತಾಲೂಕಿನ ವರಂಗ, ಮುನಿಯಾಲು, ಅಂಡಾರು ಪರಿಸರದಲ್ಲಿ ಚಿರತೆಗಳು ಕಾಣಸಿಗುವುದು ಸಾಮಾನ್ಯವಾಗಿದೆ. ಜಾನುವಾರು, ನಾಯಿಗಳ ಬೇಟೆಗಾಗಿ ಚಿರತೆಗಳು ಕಾಡಿನಿಂದ ನಾಡಿನತ್ತ ಬರುತ್ತಿದೆ. ಇದರಿಂದ ಜನತೆ ಹೊರಬರಲು ಭಯಪಡುತ್ತಿದ್ದಾರೆ.





























































































































error: Content is protected !!
Scroll to Top