ವಿಶ್ವಕಪ್‌ ವಿಜೇತ ಆಸ್ಟ್ರೇಲಿಯಾ ತಂಡದಲ್ಲಿ ಕಿನ್ನಿಗೋಳಿಯ ಯುವತಿ

ಮಂಗಳೂರು : 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಎದುರು ಆಸ್ಟ್ರೇಲಿಯಾ ಜಯಶಾಲಿಯಾಗಿದೆ. ಆಸೀಸ್ ತಂಡದ ಗೆಲುವಿನೊಂದಿಗೆ ಇದೀಗ ಭಾರತದ ನಾರಿಶಕ್ತಿಯೊಬ್ಬರ ಹೆಸರು ಮುನ್ನೆಲೆಗೆ ಬಂದಿದೆ. ವಿಶೇಷ ಎಂದರೆ ಈ ಹೆಸರು ಮಂಗಳೂರಿನದ್ದಾಗಿದೆ. ಹೌದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ 34 ವರ್ಷದ ಮಂಗಳೂರು ಮೂಲದ ಉರ್ಮಿಳಾ ರೊಸಾರಿಯೋ ಕಾರ್ಯನಿರ್ವಹಿಸುತ್ತಿದ್ದಾರೆ.

ಉರ್ಮಿಳಾ ರೊಸಾರಿಯೋ ಮೂಲತಃ ಮಂಗಳೂರಿನ ಕಿನ್ನಿಗೋಳಿಯವರು. ಐವಿ ಮತ್ತು ವಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿಯಾಗಿರುವ ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರ ಕೇರ್ ಟೇಕರ್ ಆಗಿದ್ದಾರೆ.

ಉರ್ಮಿಳಾ ರೊಸಾರಿಯೋ ಹೆತ್ತವರು ಮೂಲತಃ ಕಿನ್ನಿಗೋಳಿಯವರಾಗಿದ್ದರೂ, ಉದ್ಯೋಗದ ನಿಮಿತ್ತ ಕತಾರ್‌ನ ದೋಹಾದಲ್ಲಿ ವಾಸ್ತವ್ಯವಾಗಿದ್ದರು. ಉರ್ಮಿಳಾ ಕತಾರ್‌ನಲ್ಲಿಯೇ ಜನಿಸಿದರು. ಬಾಲ್ಯದಿಂದಲೇ ಕ್ರೀಡೆ ಬಗ್ಗೆ ಆಸಕ್ತಿ ಹೊಂದಿದ್ದ ಉರ್ಮಿಳಾ, ಮೊದಲು ಕತಾರ್ ಟೆನ್ನಿಸ್ ಫೆಡರೇಶನ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ಆಸ್ಟ್ರೇಲಿಯಾದಲ್ಲಿ ಅಡಿಟೇಲ್ ಕ್ರಿಕೆಟ್ ತಂಡದಲ್ಲಿ ಮೂರು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ಆನಂತರ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಟೀಮ್ ಮ್ಯಾನೇಜರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಕತಾರ್‌ನಲ್ಲಿ ನಡೆದ ವಿಶ್ವ ಫುಟ್ಬಾಲ್ ವೇಳೆ ನಾಲ್ಕು ತಿಂಗಳ ಕಾಲ ಸೇವೆ ಸಲ್ಲಿಸಿದ್ದರು. ಅಪಾರ ಅನುಭವದೊಂದಿಗೆ ಮತ್ತೆ ಆಸ್ಟ್ರೇಲಿಯಾಕ್ಕೆ ಮರಳಿದ ಉರ್ಮಿಳಾ ರೊಸಾರಿಯೋ, ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೇರ್ ಟೇಕರ್ ಆಗಿದ್ದಾರೆ. ವಿಶ್ವಕಪ್ ನಿರ್ವಹಣೆಗಾಗಿ ಪುರುಷರ ತಂಡದೊಂದಿಗಿದ್ದ ಉರ್ಮಿಳಾ, ಶೀಘ್ರದಲ್ಲೇ ಅವರು ಮಹಿಳಾ ಕ್ರಿಕೆಟ್ ತಂಡವನ್ನು ಸೇರಲಿದ್ದು, ಅವರೊಂದಿಗೆ ಡಿಸೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.

ಪ್ರಸ್ತುತ ಉರ್ಮಿಳಾ ರೊಸಾರಿಯೋ ಅವರ ಹೆತ್ತವರು ಕಳೆದ ಏಳು ವರ್ಷದಿಂದ ಸಕಲೇಶಪುರದಲ್ಲಿ ನೆಲೆಸಿದ್ದು, ಅಲ್ಲಿಯೇ ಎಸ್ಟೇಟ್ ಖರೀದಿಸಿ ನೆಲೆಸಿದ್ದಾರೆ.error: Content is protected !!
Scroll to Top