ಕಾರ್ಕಳ : ಉಡುಪಿಯ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪಿಯು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಡಾ.ಎನ್.ಎಸ್.ಎ.ಎಂ ಪಿಯು ಕಾಲೇಜಿನ ಕ್ರೀಡಾಪಟುಗಳು ಆರು ಚಿನ್ನ, ಆರು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡು 58 ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ನಂದಿನಿ 800 ಮೀ., 3,000 ಮೀ., 5,000 ಮೀ. ಮತ್ತು 4 ಕಿ.ಮೀ ಓಟದಲ್ಲಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಕ್ರಾಸ್ ಕಂಟ್ರಿ ರೇಸ್ ಮತ್ತು ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಪ್ರಥಮ ಪಿಯು ವಿದ್ಯಾರ್ಥಿಗಳಾದ ಜೀವಿತಾ ಹೈ ಜಂಪ್ ನಲ್ಲಿ 1.40 ಮೀಟರ್ ಎತ್ತರಕ್ಕೆ ಜಿಗಿದು ಚಿನ್ನದ ಪದಕದೊಂದಿಗೆ ಹೊಸ ಮೀಟ್ ದಾಖಲೆ ನಿರ್ಮಿಸಿದ್ದಾರೆ ಮತ್ತು ಟ್ರಿಪಲ್ ಜಂಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸಾಕ್ಷಿ 1,500 ಮೀ. ಓಟದಲ್ಲಿ ಚಿನ್ನದ ಪದಕ, 3,000 ಮೀ., 5,000 ಮೀ. ಮತ್ತು 4 ಕಿಮೀ ಕ್ರಾಸ್ ಕಂಟ್ರಿ ಓಟದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ದ್ವಿತೀಯ ಪಿಯು ವಿದ್ಯಾರ್ಥಿ ಕುಲದೀಪ್ ಕುಮಾರ್, ಜಾವೆಲಿನ್ ಥ್ರೋನಲ್ಲಿ ಚಿನ್ನ, ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಹಾಗೂ ಶಾಟ್ ಪುಟ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಜಾವೆಲಿನ್ ಥ್ರೋ ಮತ್ತು ಹ್ಯಾಮರ್ ಥ್ರೋ ವಿಭಾಗದಲ್ಲಿ ಪ್ರಥಮ ಪಿಯು ವಿದ್ಯಾರ್ಥಿ ರಾಘವೇಂದ್ರ ಆರ್. ನಾಯಕ್ ಬೆಳ್ಳಿ ಪದಕ, ಜಾವೆಲಿನ್ ಥ್ರೋನಲ್ಲಿ ಪ್ರಥಮ ಪಿಯು ವಿಜ್ಞಾನ ವಿಭಾಗದ ಶಿಯಾ ಜಿ. ಕೋಟ್ಯಾನ್ ಕಂಚಿನ ಪದಕ, ನಿಗಮ್ ಸಾಲ್ಯಾನ್ ಹೈಜಂಪ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
4*400 ಮೀಟರ್ ರಿಲೇಯಲ್ಲಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ನಂದಿನಿ, ಸಾಕ್ಷಿ, ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಜೀವಿತಾ, ಸಾಕ್ಷಿ ಬೆಳ್ಳಿ ಪದಕ ಪಡೆದಿದ್ದಾರೆ. ಬಾಲಕರ ವಿಭಾಗದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ರಿತಿಕ್, ಪ್ರಥಮ ವಿಜ್ಞಾನ ವಿಭಾಗದ ನಿಗಮ್ ಸಾಲ್ಯಾನ್, ವಾಣಿಜ್ಯ ವಿಭಾಗದ ತರುಣ್ ಜೈನ್ ಹಾಗೂ ಗುರುರಾಜ್ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ವೈಯಕ್ತಿಕ ಸಾಧನೆಯ ನೆಲೆಯಲ್ಲಿ ವಿದ್ಯಾರ್ಥಿಗಳಾದ ನಂದಿನಿ ಜಿ., ಸಾಕ್ಷಿ, ಜೀವಿತಾ, ಕುಲದೀಪ್ ಕುಮಾರ್, ರಾಘವೇಂದ್ರ ಆರ್. ನಾಯಕ್, ಗುರುರಾಜ್ ಮತ್ತು ಆದಿತ್ಯ ಧಾರವಾಡ (ಬಾಲಕಿಯರಿಗಾಗಿ) ಮತ್ತು ಬೆಂಗಳೂರಿನಲ್ಲಿ (ಬಾಲಕರಿಗೆ) ನಡೆಯಲಿರುವ ಕರ್ನಾಟಕ ರಾಜ್ಯ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.