ಕಾರ್ಕಳ : ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ) ಸಿರಿಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಅ. 18 ರಂದು ಸಿರಿಗೆರೆ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ನಡೆದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ (14 ಮತ್ತು 17ರ ವಯೋಮತಿಯೊಳಗಿನ) ಕಾರ್ಕಳ ಜ್ಞಾನಸುಧಾದ ವಿದ್ಯಾರ್ಥಿನಿ ಅನ್ವಿ ಎಚ್. ಅಂಚನ್ (8ನೇ ತರಗತಿ) ರಿದಮಿಕ್ ಯೋಗಾಸನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮೂಲಕ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಕಾರ್ಕಳದ ಹರೀಶ್ ಅಂಚನ್ ಹಾಗೂ ಶೋಭಾ ದಂಪತಿ ಪುತ್ರಿ.
ಸಾಧಕ ವಿದ್ಯಾರ್ಥಿನಿಗೆ ಅಜೆಕಾರು ಪದ್ಮಗೋಪಾಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
ಯೋಗಾಸನ ಸ್ಪರ್ಧೆ : ಜ್ಞಾನಸುಧಾದ ಅನ್ವಿ ಎಚ್. ಅಂಚನ್ ರಾಷ್ಟ್ರ ಮಟ್ಟಕ್ಕೆ







































