ಎಡರಂಗದ ಸರಕಾರದಲ್ಲಿ ಬಲಪಂಥೀಯ ಮಂತ್ರಿ !

ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು

ಬೆಂಗಳೂರು : ಬಿಜೆಪಿ ಮತ್ತು ಸಿಪಿಎಂ ಸಂಪೂರ್ಣ ತದ್ವಿರುದ್ಧ ಸಿದ್ಧಾಂತ ಹೊಂದಿರುವ ಪಕ್ಷಗಳು. ಎಡ-ಬಲ ಸಿದ್ಧಾಂತಗಳ ನಡುವೆ ಸದಾ ಸೈದ್ಧಾಂತಿಕ ಸಂಘರ್ಷ ನಡೆಯುತ್ತಿರುತ್ತದೆ. ಬಿಜೆಪಿ ದೇಶದಲ್ಲಿ ಬಲಿಷ್ಠವಾದ ಬಳಿಕವಂತೂ ಬಲಪಂಥೀಯರು ಮತ್ತು ಎಡಪಂಥೀಯರು ಸೈದ್ಧಾಂತಿಕ ನೆಲೆಗಟ್ಟನ್ನು ಮೀರಿದ ಕಿತ್ತಾಟ, ಹೋರಾಟ ಮಾಡಿಕೊಂಡು ಬಂದವರು. ಇವೆರಡು ಪಕ್ಷಗಳು ಎಂದೂ ಒಂದಾಗುವ ಮಾತು ಬಿಡಿ, ಒಂದೇ ವೇದಿಕೆ ಹಂಚಿಕೊಳ್ಳುವ ಸಾಧ್ಯತೆಯೂ ಕಡಿಮೆ. ಆದರೆ, ರಾಜಕೀಯದಲ್ಲಿ ಯಾವೂದೂ ಅಸಾಧ್ಯವಲ್ಲ. ಇದೀಗ ಬದಲಾದ ಪರಿಸ್ಥಿತಿಯಲ್ಲಿ ಎಡ ಸಿದ್ಧಾಂತದ ಮೈತ್ರಿಕೂಟದಲ್ಲಿ ಬಲಪಂಥದ ಮಂತ್ರಿಯೊಬ್ಬರು ಅಧಿಕಾರ ಅನುಭವಿಸುತ್ತಿರುವ ವಿಚಿತ್ರ ಸನ್ನಿವೇಶವೊಂದು ಏರ್ಪಟ್ಟಿದೆ. ಇದಕ್ಕೆಲ್ಲ ಕಾರಣವಾಗಿರುವುದು ಜೆಡಿಎಸ್‌ ಇತ್ತೀಚೆಗೆ ತಗೊಂಡ ನಿರ್ಧಾರ.

ಮುಂಬರುವ ಲೋಕಸಭಾ ಚುನಾವಣೆಗಾಗಿ ಜೆಡಿಎಸ್‌ ಮತ್ತು ಬಿಜೆಪಿ ಒಂದಾಗಿವೆ. ಇದು ಕರ್ನಾಟಕದಲ್ಲಾದ ಹೊಂದಾಣಿಕೆಯಾದರೂ ಜೆಡಿಎಸ್‌ ಹೆಸರಿಗಾದರೂ ರಾಷ್ಟ್ರೀಯ ಪಕ್ಷ. ಕೇರಳ ಸೇರಿ ಕೆಲವೆಡೆ ಅದು ಇತರ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಒಂದೆರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಕೇರಳದಲ್ಲಿ ಜೆಡಿಎಸ್‌ನ ಕೆ. ಕೃಷ್ಣನ್‌ ಕುಟ್ಟಿ ಎಂಬವರು ಎಡಪಕ್ಷಗಳ ಮೈತ್ರಿಕೂಟದಲ್ಲಿ ಗೆದ್ದು ಪಿಣರಾಯಿ ವಿಜಯನ್‌ ನೇತೃತ್ವದ ಎಡರಂಗ ಸರಕಾರದಲ್ಲಿ ಮಂತ್ರಿಯೂ ಆಗಿದ್ದಾರೆ. ಇದೀಗ ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡು ಎನ್‌ಡಿಎ ಒಕ್ಕೂಟ ಸೇರಿರುವುದರಿಂದ ಪಕ್ಷದ ನೆಲೆಯಲ್ಲಿ ಇವರು ಕೂಡ ಎನ್‌ಡಿಎ ಮೈತ್ರಿಕೂಟದ ಭಾಗವಾಗುತ್ತಾರೆ. ಜೆಡಿಎಸ್‌ನ ಎಲ್ಲ ರಾಜ್ಯ ಘಟಕಗಳು ಎನ್‌ಡಿಎ ಜತೆ ಮೈತ್ರಿ ಮಾಡಿಕೊಳ್ಳಲು ಸಹಮತ ಹೊಂದಿವೆ ಹಾಗೂ ಎಲ್ಲರಿಗೂ ಈ ವಿಚಾರವನ್ನು ತಿಳಿಸಲಾಗಿದೆ ಎಂದು ಜೆಡಿಎಸ್‌ ವರಿಷ್ಠ ದೇವೇಗೌಡರು ಈಗಾಗಲೇ ಹೇಳಿರುವುದರಿಂದ ಕೇರಳದ ಜೆಡಿಎಸ್‌ ಘಟಕವೂ ಎನ್‌ಡಿಎ ಮೈತ್ರಿಕೂಟದಲ್ಲಿ ಸೇರಿದಂತಾಗಿದೆ. ಹೀಗೆ ಎಡರಂಗದ ಸರಕಾರದಲ್ಲಿ ಬಲಪಂಥೀಯ ಮೈತ್ರಿಕೂಟದ ಸಚಿವರು ಇರುವ ಅಪರೂರದ ಸನ್ನಿವೇಶ ಏರ್ಪಟ್ಟಿದೆ. ಇದು ರಾಜಕೀಯದಲ್ಲಿ ಯಾವೂದು ಅಸಾಧ್ಯವಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದಂತಿದೆ.

ದೇವೆ ಗೌಡರ ನಿರ್ಧಾರದ ಕುರಿತಂತೆ ಕೇರಳದಲ್ಲಿ ಬಿರುಸಿನ ಚರ್ಚೆ ನಡೆಯುತ್ತಿದೆ. ನಾಳೆ ಕೇರಳ ಜೆಡಿಎಸ್‌ ಘಟಕ ಸಿಡಿಯಲೂಬಹುದು. ಆದರೆ ಸದ್ಯಕ್ಕಂತೂ ಕೇರಳದಲ್ಲಿ ಜೆಡಿಎಸ್‌ ಎಡರಂಗದ ಮೈತ್ರಿಕೂಟದಲ್ಲಿದೆ. ಅಂತೆಯೇ ರಾಷ್ಟ್ರೀಯ ಮಟ್ಟದಲ್ಲಿ ಜೆಡಿಎಸ್‌ ಎನ್‌ಡಿಎ ಮೈತ್ರಿಕೂಟದಲ್ಲಿದೆ. ಇದೊಂದು ರೀತಿಯ ವಿಚಿತ್ರ ರಾಜಕೀಯ ಪರಿಸ್ಥಿತಿಯಾಗಿದೆ.















































































error: Content is protected !!
Scroll to Top