ಮಂಜೂರಾದ ಅನುದಾನ ಬಿಡುಗಡೆಗೊಳಿಸದಿದ್ದಲ್ಲಿ ಭಿಕ್ಷೆ ಬೇಡಿಯಾದರೂ ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿ ಪೂರ್ಣಗೊಳಿಸುವೆ – ಸುನಿಲ್‌ ಕುಮಾರ್‌

ಕಾಮಗಾರಿ ಗುಣಮಟ್ಟದಲ್ಲಿ ಅನುಮಾನವಿದ್ದಲ್ಲಿ ತನಿಖೆ ನಡೆಸಲು ಆಗ್ರಹ

ಕಾಂಗ್ರೆಸ್‌ ವಿರುದ್ಧ ಗುಡುಗಿದ ಮಣಿರಾಜ್‌ ಶೆಟ್ಟಿ ಮಹಾವೀರ ಹೆಗ್ಡೆ

ಕಾರ್ಕಳ : ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿಗೆ ಬಿಜೆಪಿ ಆಡಳಿತಾವಧಿಯಲ್ಲಿ ಮಂಜೂರುಗೊಳಿಸಿದ ಅನುದಾನವನ್ನು ಸರಕಾರ ಬಿಡುಗಡೆಯಾಗೊಳಿಸದಿದ್ದಲ್ಲಿ ಭಿಕ್ಷೆ ಬೇಡಿಯಾದರೂ ತಾನು ಕಾಮಗಾರಿ ಪೂರ್ಣಗೊಳಿಸುವೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಭಾವೋದ್ವೇಗದಿಂದ ಹೇಳಿದರು.

ಅವರು ಶನಿವಾರ ಶಾಸಕರ ಕಚೇರಿ ವಿಕಾಸದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾರ್ಕಳದ ಬಗ್ಗೆ ಪ್ರೀತಿ, ಅಭಿಮಾನ ಇಲ್ಲದವರಿಂದ ಮಾತ್ರ ಕಾರ್ಕಳದ ಬಗ್ಗೆ ಅಪಪ್ರಚಾರ ಮಾಡಲು ಸಾ‍ಧ್ಯ. ನನಗೆ ಕಾರ್ಕಳದ ಬಗ್ಗೆ ಅತೀವ ಪ್ರೀತಿ, ಅಭಿಮಾನವಿರುವುದರಿಂದಲೇ 2004 ರಿಂದ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಎಚ್ಚರಿಕೆಯಿಂದಿರುವುದು ಅಗತ್ಯ
ಅಪಪ್ರಚಾರ, ಟೀಕೆಗಳಿಗೆ ಪ್ರತಿಕ್ರಿಯಿಸಲು ಹೋದವನಲ್ಲ. ಕಳೆದ ನವೆಂಬರ್‌ ನಲ್ಲಿ ಡೀಲ್‌ ಮಾಸ್ಟರ್‌ ಕಾರ್ಕಳಕ್ಕೆ ಪ್ರವೇಶ ಮಾಡಿದ ಅನಂತರ ಅಪಪ್ರಚಾರ ನಡೆಸಲು ಪ್ರಾರಂಭವಾಯಿತು. ಎಡಪಂಥೀಯರು, ನಗರ ನಕ್ಸಲರು, ಅನ್ಯಧರ್ಮಿಯರು, ಕಮ್ಯೂನಿಸ್ಟರು ವ್ಯವಸ್ಥಿತವಾಗಿ ರಾಜ್ಯದಾದ್ಯಂತ ಇದೇ ರೀತಿಯ ಸಂಚು ರೂಪಿಸುತ್ತಿದ್ದಾರೆ. ಇದರ ಬಗ್ಗೆ ನಾವು ಎಚ್ಚರಿಕೆಯಿಂದಿರುವುದು ಅಗತ್ಯವೆಂದು ಸುನಿಲ್‌ ಕುಮಾರ್‌ ಹೇಳಿದರು.

10 ವರ್ಷದ ಕನಸು
ಕೆಲವರು ಪ್ರಚಾರಕ್ಕಾಗಿ ಕಾರ್ಕಳದ ಅಭಿವೃದ್ಧಿ ಬಗ್ಗೆ ಗೇಲಿ ಮಾಡುತ್ತಾರೆ. ಪರಶುರಾಮ ಥೀಮ್ ಪಾರ್ಕ್ ನಾಲ್ಕು ದಿನದ ಯೋಜನೆಯಲ್ಲ. 10 ವರ್ಷಗಳ‌‌ ನನ್ನ ಕನಸು. ಅದನ್ನು ನಿರ್ಮಾಣ ಮಾಡಿದ ಹಿಂದಿನ ಪರಿಶ್ರಮ ನಮಗೆ ಮಾತ್ರ ತಿಳಿದಿದೆ. ಅದರ ಬಗ್ಗೆ ಮಾತನಾಡುವವರು ಕಾರ್ಕಳದ ಇನ್ನೊಂದು ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಿ. ನಿಮ್ಮ ಜೊತೆ ನಾವು ಇರುತ್ತೇವೆ ಎಂದು ಸುನಿಲ್‌ ಕುಮಾರ್‌ ಸವಾಲೆಸೆದರು.

ಅಂದೇ ಹೇಳಿದ್ದೆ
ಉದ್ಘಾಟನಾ ಸಮಾರಂಭದಲ್ಲೇ ಪರಶುರಾಮ ಥೀಮ್‌ ಪಾರ್ಕ್‌ ಕೆಲಸ ಪೂರ್ಣಗೊಂಡಿಲ್ಲ ಎಂದು ಹೇಳಿದ್ದೆ. ಅಂದು ಸರಕಾರ 16.5 ಕೋಟಿ ರೂ. ಯೋಜನೆಗೆ ಮಂಜೂರಾತಿ ನೀಡಿತ್ತು. ಅದರಲ್ಲಿ 6.5 ಕೋಟಿ ರೂ. ಬಿಡುಗಡೆಗೊಂಡಿದ್ದು ಬಾಕಿ ಮೊತ್ತವನ್ನು ಸರಕಾರ ಇನ್ನು ಬಿಡುಗಡೆಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ನವರೂ ಪ್ರಯತ್ನಪಡುತ್ತಿದ್ದಲ್ಲಿ ನಾನೂ ಅವರನ್ನು ಕಾರ್ಕಳದ ಬಗ್ಗೆ ಕಾಳಜಿ ಇದೆ ಎಂದು ಮೆಚ್ಚುಕೊಳ್ಳುತ್ತಿದೆ ಎಂದು ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.

ತನಿಖೆ ನಡೆಸಿ
ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿಯ ಗುಣಮಟ್ಟದಲ್ಲಿ ಅನುಮಾನವಿದ್ದಲ್ಲಿ ತನಿಖೆ ನಡೆಸಿ. ನಿಮ್ಮದೇ ಸರಕಾರ ಅಧಿಕಾರಕ್ಕೆ ಬಂದು 5 ತಿಂಗಳಾಯ್ತು. ಕಾಮಗಾರಿಯಲ್ಲಿ ಲೋಪವಾಗಿದ್ದಲ್ಲಿ ಶಿಕ್ಷೆಯಾಗಲಿ ಎಂದು ತಿಳಿಸಿದ ಸುನಿಲ್‌ ಕುಮಾರ್‌ ಪರಶುರಾಮ ಥೀಮ್‌ ಪಾರ್ಕ್‌ ಧಾರ್ಮಿಕ ಕೇಂದ್ರವಲ್ಲ. ಅದೊಂದು ಪ್ರವಾಸಿ ತಾಣ. ಆದರೆ, ಇದೀಗ ಕೆಲವರು ಧಾರ್ಮಿಕ ಭಾವನೆಗೆ ಧಕ್ಕೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

ಬದ್ಧತೆ – ನಿಯತ್ತಿಲ್ಲದ ಮನುಷ್ಯ
ಮನುಷ್ಯನಿಗೆ ಬದ್ಧತೆ ಮತ್ತು ನಿಯತ್ತು ಮುಖ್ಯ. ಆದರೆ, ಉದಯ ಕುಮಾರ್ ಶೆಟ್ಟಿಗೆ ಇವೆರಡೂ ಇಲ್ಲ. ಆದ್ದರಿಂದ ಕಾರ್ಕಳದ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಸುನಿಲ್‌ ಕುಮಾರ್‌ ಮುನಿಸಿಪಾಲಿಟಿ ಚಿಲ್ಲರೆ ಮನುಷ್ಯ ಕಳೆದ ದಶಕಗಳಿಂದ ನನ್ನ ಮೇಲೆ ಆರೋಪ ಮಾಡಿಕೊಂಡೇ ಬಂದಿದ್ದಾರೆ. ಸಾಮಾಜಿಕ ಬದ್ಧತೆಯೇ ಇಲ್ಲದವರು ಟೀಕೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಐದು ಆಗ್ರಹ
ತಡೆ ಹಿಡಿದ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ಗುಣಮಟ್ಟದಲ್ಲಿ ಅನುಮಾನವಿದ್ದಲ್ಲಿ ತನಿಖೆ ಮಾಡಿಸಿ, ಸ್ಥಗಿತಗೊಂಡ ಕಾಮಗಾರಿ ಮುಂದುವರೆಸಿ, ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಿ, ಸುಳ್ಳು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸುನಿಲ್‌ ಕುಮಾರ್‌ ಇದೇ ಸಂದರ್ಭ ಆಗ್ರಹಿಸಿದರು.

ನೀತಿ ಸಂಹಿತೆ ಜಾರಿ ಮುಂಚೆ ಉದ್ಘಾಟನೆ ಸಹಜ
ಯಾವುದೇ ಕಾಮಗಾರಿ ಆಗಿರಲಿ. ಚುನಾವಣಾ ನೀತಿ ಸಂಹಿತೆ ಜಾರಿಗೆ ಮುನ್ನ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಹಜ. ಉದ್ಘಾಟನೆ ತರಾತುರಿ ಅಂತ ಕಾಂಗ್ರೆಸ್‌ ನವರು ಹೇಳಿಕೊಂಡು ಬಂದಿದ್ದಾರೆ. ಇಂತಹ ಸಾಮಾನ್ಯ ಪ್ರಜ್ಞೆಯೂ ಕಾಂಗ್ರೆಸಿಗರಿಗೆ ಇಲ್ಲದಿರುವುದು ದುರಂತವೆಂದು ಸುನಿಲ್‌ ಕುಮಾರ್‌ ವ್ಯಂಗ್ಯವಾಡಿದರು.

ಅಭಿವೃದ್ಧಿ ಕಾರ್ಯಗಳ ಅಪಹಾಸ್ಯ – ವಿಷಾದನೀಯ
ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್‌ ಶೆಟ್ಟಿ ಮಾತನಾಡಿ, ಕಾರ್ಕಳದಲ್ಲಿ ಅಭಿವೃದ್ಧಿಯನ್ನು ಪರಿಚಯಿಸಿದವರು ಸುನಿಲ್ ಕುಮಾರ್. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಬೈಲೂರಿನಲ್ಲಿ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಮಾಡಿದರು‌. ಆದರೆ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ವಿಷಾದನೀಯ ಎಂದರು.

ಚುನಾವಣೆಗೆ ಸೀಮಿತವಾಗಿರಬೇಕು
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಕೇವಲ ಚುನಾವಣೆಗೆ ಸೀಮಿತವಾಗಿರಬೇಕು. ಕ್ಷೇತ್ರದ ಅಭಿವೃದ್ಧಿಯಲ್ಲಿ ನಾವೆಲ್ಲಾ ಒಂದೇ ಎನ್ನುವಂತಾಗಬೇಕು. ಆದರೆ ಉದಯ ಕುಮಾರ್ ಶೆಟ್ಟಿ ಇದಕ್ಕೆ ತದ್ವಿರುದ್ದವಾಗಿದ್ದಾರೆ ಎಂದು ಮಣಿರಾಜ್‌ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಏನು ಮಾಡಿದೆ ಎಂದು ಅವಲೋಕಿಸಲಿ
ಸುನಿಲ್‌ ಕುಮಾರ್ ಅವರು ಮಾಡಿದ ಅಭಿವೃದ್ಧಿ ಕಾರ್ಯ ಸರಿಯಿಲ್ಲ ಎನ್ನುವವರು ವೀರಪ್ಪ ಮೋಯ್ಲಿಯವರು ತಮ್ಮ ಅವಧಿಯಲ್ಲಿ ಹಾಕಿದ್ದಂತಹ ಕೆಸರು ಕಲ್ಲುಗಳನ್ನು ಲೆಕ್ಕ ಹಾಕಲಿ. ಅವುಗಳೆಲ್ಲವೂ ಕೆಸರಿನಲ್ಲಿ ಹೂತು ಹೋಗಿದೆ ಎಂದು ಮಣಿರಾಜ್‌ ಶೆಟ್ಟಿ ಹೇಳಿದರು.

ಕಾಂಗ್ರೆಸ್‌ ನಲ್ಲಿ ಹಲವು ಬಣ
ಕಾಂಗ್ರೆಸ್ ನಲ್ಲಿ ವಿವಿಧ ಬಣಗಳಿದ್ದು, ಅವರವರ ನಡುವೆಯೇ ಒಳಜಗಳವಿದೆ. ಅಂತಹವರು ಬಿಜೆಪಿ ಮತ್ತು ಸುನೀಲ್ ಕುಮಾರ್ ಅವರ ಪ್ರಭಾವವನ್ನೂ ಹೇಗಾದರೂ ಮಾಡಿ ಕಡಿಮೆ ಮಾಡಬೇಕೆಂದು ಈ ರೀತಿ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಜನತೆಗೆ ಸತ್ಯ ಸಂಗತಿ ತಿಳಿಸುವ ಕೆಲಸ‌ ನಮ್ಮಿಂದಾಗಬೇಕು. ಅವರು ಯಾವ ಉದ್ದೇಶದಿಂದ ಪರಶುರಾಮ ಥೀಮ್ ಪಾರ್ಕ್ ನ ಹಿಂದೆ ಬಿದ್ದಿದ್ದಾರೆ ಎಂದು ತಿಳಿಸುವಂತಾಗಬೇಕು. ಇದಕ್ಕಾಗಿ‌ ನಾವು ಸಂಘಟಿತರಾಗಬೇಕೆಂದು ಮಣಿರಾಜ್‌ ಶೆಟ್ಟಿ ತಿಳಿಸಿದರು.

ಫುಟ್ ಬಾಲ್ ಪ್ಲೇಯರ್
ಎಣ್ಣೆ ಹೊಳೆಯಲ್ಲಿ ಫುಟ್ ಬಾಲ್ ಆಡಲು ಆರಂಭಿಸಿದವರು ಬಳಿಕ ಕ್ಷೇತ್ರದಲ್ಲಿ ಅಪಪ್ರಚಾರ ಮಾಡಲು ಪ್ರಾರಂಭಿಸಿದರು. ಡೀಲ್‌ ಮಾಡಿಕೊಂಡು ಕಾರ್ಕಳ ಬಂದಿರುವ ಅವರು ನಿರಂತರ ಆರೋಪ ಮಾಡಿಕೊಂಡು ಬಂದರು. ಚುನಾವಣೆ ಅನಂತರ ಕಾರ್ಕಳದಿಂದ ಹೋದವರು ಮತ್ತೆ ಕಾರ್ಕಳದ ಕಡೆಗೆ ಹಿಂತಿರುಗಲಿಲ್ಲ ಎಂದು ಪ್ರಮೋದ್ ಮುತಾಲಿಕ್ ಬಗ್ಗೆ ಮಹಾವೀರ ಹೆಗ್ಡೆ ಲೇವಡಿ ಮಾಡಿದರು. ಕಾರ್ಕಳ ಇಡೀ ರಾಜ್ಯದಲ್ಲಿ ಹೆಸರು ಪಡೆದ ಕ್ಷೇತ್ರ. ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಟ್ಟ ನಾಡು. ಸುನಿಲ್ ಕುಮಾರ್ ಅವರು ತಮ್ಮ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕವೇ ರಾಜ್ಯದಲ್ಲಿ ಕಾರ್ಕಳದ ಹೆಸರಿನ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಮಹಾವೀರ ಹೆಗ್ಡೆ ಬಣ್ಣಿಸಿದರು.

ಹತ್ತಿಕ್ಕಲು ಬಿಜೆಪಿಗರಿಗೆ ಗೊತ್ತಿದೆ
ನಮ್ಮ ವಿರುದ್ಧ ಇದೇ ರೀತಿ ಅಪಪ್ರಚಾರ‌ ಮುಂದುವರೆಸಿದರೆ ಅದನ್ನು ಹತ್ತಿಕ್ಕಲು ನಮಗೂ ಗೊತ್ತಿದೆ. ನೀವು ರಾಡ್ ನಿಂದ ಹೊಡೆದರೆ ಅದಕ್ಕಿಂತ ದೊಡ್ಡ ರಾಡ್ ನಿಂದ ಹೊಡೆಯಲು ನಮಗೂ ಗೊತ್ತಿದೆ ಎಂದು ತಿರುಗೇಟು ನೀಡಿದ ಮಹಾವೀರ ಹೆಗ್ಡೆ ಚಿಲ್ಲರೆ ನಾಯಕರಿಂದ ಕಾರ್ಕಳದ ಅಭಿವೃದ್ಧಿಗೆ ಕಳಂಕ ಎಂದು ಗುಡುಗಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ರವೀಂದ್ರ ಕುಮಾರ್ ಕುಕ್ಕುಂದೂರು ಹಾಗೂ ರೇಷ್ಮಾ‌ಉದಯ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಸವಿತಾ, ಸಾಮಾಜಿಕ ಮುಂದಾಳು ಸುಧೀರ್ ಹೆಗ್ಡೆ ಉಪಸ್ಥಿತರಿದ್ದರು. ಬಿಜೆಪಿ ತಾಲೂಕು ಕಾರ್ಯದರ್ಶಿ ನವೀನ್‌ ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು.















































































error: Content is protected !!
Scroll to Top