ಬೆಂಗಳೂರು : ಬಿಜೆಪಿ ಪಕ್ಷ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈದಿದೆ. ರಾಜ್ಯ ಸರಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿದೆ. ಬಿಜೆಪಿ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ ಗಳನ್ನು ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಇದಕ್ಕೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ.
ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿದೆ. ಎಟಿಎಂ ಸರಕಾರದಲ್ಲಿ ಭ್ರಷ್ಟಾಚಾರದ ದರ್ಬಾರ್ ಎಂಬ ಪೋಸ್ಟರ್ ಬಿಡುಗಡೆ ಮಾಡಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ, ಶಾಸಕ ರವಿಸುಬ್ರಹ್ಮಣ್ಯ, ಎಂಎಲ್‌ಸಿಗಳಾದ ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ಅವರು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಟ್ವೀಟ್
ರಾಜ್ಯಕ್ಕೆ ಹೈಕಮಾಂಡ್ನ ಕಲೆಕ್ಷನ್ ಏಜೆಂಟ್ಗಳಾದ ಸುರ್ಜೇವಾಲ, ವೇಣುಗೋಪಾಲ್ ಬಂದಿದ್ದರು. ಅವರು ನಿಗಮ ಮಂಡಳಿ ನೇಮಕಕ್ಕೆ ರೇಟ್ ಕಾರ್ಡ್ ಫಿಕ್ಸ್ ಮಾಡಿದ್ದಾರೆ. ಕಾಂಗ್ರೆಸ್ ಸ್ನೇಹಿತರು ಕೊಟ್ಟ ನಿಗಮ ಮಂಡಳಿಗಳ ರೇಟ್ ಕಾರ್ಡ್ ಇಂತಿದೆ ಎಂದು ಟ್ವೀಟ್ನಲ್ಲಿ ಬಿಜೆಪಿ ಪಟ್ಟಿ ನೀಡಿದೆ. ಬಿಡಿಎಗೆ 50 ಕೋಟಿ ರೂಪಾಯಿ, ಬಿಡಬ್ಲ್ಯೂಎಸ್‌ಎಸ್‌ಬಿಗೆ 45 ಕೋಟಿ ರೂಪಾಯಿ, ಕೆಆರ್ಐಡಿಎಲ್ಗೆ 20 ಕೋಟಿ ರೂಪಾಯಿ, ಕಿಯೋನಿಕ್ಸ್-₹15 ಕೋಟಿ, ಕರ್ನಾಟಕ ಉಗ್ರಾಣ ನಿಗಮ-₹12 ಕೋಟಿ, ಬಿಎಂಟಿಸಿಗೆ 10 ಕೋಟಿ ರೂ. ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಸರಕಾರದ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಟ್ವೀಟ್ ಲಿಂಕ್ : https://x.com/BJP4Karnataka/status/1715221454030266659?s=20
ಹತ್ತು ಹಲವು ನಿಗಮಗಳಿಗೆ ಕಲೆಕ್ಷನ್ ಮಾಸ್ಟರ್ಸ್‌ಗಳಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚು ಮೊತ್ತದ ಕಲೆಕ್ಷನ್ ಸಾಧ್ಯತೆ ಇದೆಯಂತೆ. ಜನರ ಶ್ರಮದ ದುಡಿಮೆಯ ಹಣವನ್ನು ವಲಯವಾರು ಲೂಟಿ ಮಾಡಿ ಹೈಕಮಾಂಡ್‌ಗೆ ತಲುಪಿಸುತ್ತಿರುವ ಕಲೆಕ್ಷನ್ ಮಾಸ್ಟರ್ಗಳು ಎಂದು ಬಿಜೆಪಿ ಕಿಡಿಕಾರಿದೆ.
ಕಾಂಗ್ರೆಸ್ ತಿರುಗೇಟು
ಬಿಜೆಪಿ ಟ್ವೀಟ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸೋಲಿನ ಹತಾಶೆ, ಶೂನ್ಯ ನಾಯಕತ್ವದಿಂದಾಗಿ ಬಿಜೆಪಿಗೆ ದೃಷ್ಟಿ ದೋಷ ಉಂಟಾಗಿದೆ. ಕಣ್ಣು ಕುರುಡಾದ ಕಾರಣ ಬೇರೆಯವರನ್ನ ಕಾಣೆಯಾಗಿದ್ದಾರೆ ಎನ್ನುತ್ತಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕುರುಡುತನ ಸರಿಪಡಿಸಿಕೊಳ್ಳಲಿ. ಶೀಘ್ರವೇ ಅಧಿಕಾರ ಕಳೆದುಕೊಂಡ ಹತಾಶೆಯಿಂದ ಹೊರಬರಲಿ. ದೃಷ್ಟಿ ದೋಷ ಸರಿಹೋಗಲಿ ಎಂದು ಹಾರೈಸುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತಿರುಗೇಟಿ ನೀಡಿದೆ.
ಟ್ವೀಟ್ ಲಿಂಕ್ : https://x.com/INCKarnataka/status/1714978232385290484?s=20














































































