ನ್ಯಾಯಾಲಯದಲ್ಲಿನ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ವಿದೇಶಿ ಕಾನೂನು, ವಿಜ್ಞಾನ ಅಥವಾ ಕಲೆಯನ್ನು ಕುರಿತ ಅಂಶದ ಬಗ್ಗೆ, ವಿವಾದಿತ ಕೈಬರಹ (ಬರಹ ಅಥವಾ ಸಹಿ) ಬೆರಳೊತ್ತುಗಳನ್ನು (ಹೆಬ್ಬೆಟ್ಟು) ಗುರುತಿಸುವ ಸಂಬಂಧದಲ್ಲಿ ನ್ಯಾಯಾಲಯವು ಅಭಿಪ್ರಾಯವನ್ನು ರೂಪಿಸಿಕೊಳ್ಳಬೇಕಾಗಿರುವ ಸಂದರ್ಭದಲ್ಲಿ ಇಂತಹ ವಿಷಯದ ಬಗ್ಗೆ ಅಂದರೆ ವಿದೇಶಿ ಕಾನೂನಿನಲ್ಲಿ, ವಿಜ್ಞಾನದಲ್ಲಿ, ಕಲೆಯಲ್ಲಿ, ಕೈಬರಹ ಅಥವಾ ಬೆರಳೊತ್ತುಗಳ ವಿಷಯಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ತಜ್ಞರ ಅಭಿಪ್ರಾಯಗಳು ಬಹಳ ಮಹತ್ವವನ್ನು ಹೊಂದಿರುತ್ತದೆ.
ಈ ರೀತಿಯಾಗಿ ವಿಶೇಷ ಪರಿಣತಿಯನ್ನು ಹೊಂದಿರುವ ವ್ಯಕ್ತಿಗಳನ್ನು ತಜ್ಞರೆಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಯಾವುದೇ ವ್ಯಕ್ತಿಯ ಅಸಹಜ ಮರಣದ ಕಾರಣವನ್ನು ನಿರ್ಧರಿಸಲು, ಒಬ್ಬ ಅಸ್ವಸ್ಥ ವ್ಯಕ್ತಿ ಯಾವುದೇ ಅಪರಾಧಿತ ಕೃತ್ಯವನ್ನು ನಡೆಸಿದ ಸಂದರ್ಭದಲ್ಲಿ ಆತನ ಮಾನಸಿಕ ಸ್ಥಿತಿಯನ್ನು ನಿರ್ಧರಿಸಲು, ಯಾವುದೇ ಒಂದು ವಿವಾದಿತ ದಾಖಲೆಯ ಕೈಬರಹ, ಅಥವಾ ಸಹಿ ವಿವಾದಕ್ಕೆ ಒಳಪಟ್ಟಾಗ ಸಹಿಯ ನೈಜ್ಯತೆಯನ್ನು ನಿರ್ಧರಿಸಲು ನ್ಯಾಯಾಲಯವು ತಜ್ಞರ ಅಭಿಪ್ರಾಯವನ್ನು ಪಡೆದು ವಿವಾದವನ್ನು ನಿರ್ಧರಿಸಬಹುದಾಗಿದೆ. ಕೆಲವು ಸಂದರ್ಭಗಳಲ್ಲಿ ನ್ಯಾಯಾಲಯವು ವಿದ್ಯನ್ಮಾನ ಸಾಕ್ಷ್ಯಾಧಾರದ ಆಧಾರದ ನೆಲೆಯಲ್ಲಿ ಪ್ರಕರಣವನ್ನು ತೀರ್ಮಾನಿಸಬೇಕಾಗುವ ಸಂದರ್ಭದಲ್ಲಿ ನ್ಯಾಯಾಲಯವು, ಯಾವುದೇ ಗಣಕಯಂತ್ರದಲ್ಲಿ ಅಥವಾ ಯಾವುದೇ ಇತರ ವಿದ್ಯುನ್ಮಾನ ರೂಪದಲ್ಲಿ ಇಲ್ಲವೆ ಡಿಜಿಟಲ್ ರೂಪದಲ್ಲಿ ರವಾನಿಸಿದ ಅಥವಾ ಸಂಗ್ರಹಿಸಿದ ಯಾವುದೇ ಮಾಹಿತಿಗೆ ಸಂಬಂಧಿಸಿದಂತೆ ಅಭಿಪ್ರಾಯವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಅಧಿನಿಯಮ, 2000 ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮದ ನಿಯಮಾನುಸಾರವಾಗಿ ವಿದ್ಯುನ್ಮಾನ ಸಾಕ್ಷ್ಯ ಪರೀಕ್ಷಕನ ಅಭಿಪ್ರಾಯವು ಬಹಳ ಮುಖ್ಯವಾಗಿರುತ್ತದೆ.
ಮಾಹಿತಿ ತಂತ್ರಜ್ಞಾನವು ವ್ಯಕ್ತಿಗಳ ಒಳಗಿನ ವಿವಾದಿತ ಸಂಭಾಷಣೆ, ಇಲೆಕ್ಟ್ರಾನಿಕ್ ದಸ್ತಾವೇಜು ಅಥವಾ ದಾಖಲೆ, ಪುಸ್ತಕ ಮತ್ತಿತರ ಕಾಗದ ಪತ್ರಗಳನ್ನು ಒಳಗೊಂಡಿರುತ್ತದೆ. ಕೆಲವು ಸಿವಿಲ್ ಪ್ರಕರಣದಲ್ಲಿ ಯಾವುದೇ ಸ್ತಿರಾಸ್ಥಿಯ ಗಡಿವಿವಾದವನ್ನು ನ್ಯಾಯಾಲಯವು ತೀರ್ಮಾನಿಸಬೇಕಾದ ಸಂದರ್ಭದಲ್ಲಿ ನ್ಯಾಯಾಲಯವು ಕಂದಾಯ ಇಲಾಖೆಗೆ ಸಂಬಂಧಪಟ್ಟ ಸರ್ವೆ ವಿಷಯದಲ್ಲಿ ಪರಿಣತಿಯನ್ನು ಹೊಂದಿರುವ ಸರ್ವೆಯರ್ (ಮೋಜಣಿದಾರನಿಂದ) ದಾವೆಗೆ ಸಂಬಂಧಪಟ್ಟ ಸ್ಥಿರಾಸ್ತಿಯನ್ನು ಅಳತೆ ಮಾಡಿಸಿ ವಿವಾದಿತ ಗಡಿಗುರುತುಗಳನ್ನು ಮತ್ತಿತರ ವಿವಾದಿತ ವಿಷಯಗಳ ಬಗ್ಗೆ ಆತನಿಂದ ವರದಿಯನ್ನು ಪಡೆದು ವಿವಾದವನ್ನು ತೀರ್ಮಾನಿಸಬಹುದಾಗಿದೆ. ಅದೇ ಪ್ರಕಾರ ಯಾವುದೇ ಕಟ್ಟಡಕ್ಕೆ ಸಂಬಂಧಪಟ್ಟಂತೆ ಅದರ ಮೌಲ್ಯದ ಬಗ್ಗೆ, ಪ್ರಾಯದ ಬಗ್ಗೆ, ಸ್ಥಿತಿಯ ಬಗ್ಗೆ ಮತ್ತಿತರ ಮೌಲ್ಯಗಳ ಬಗ್ಗೆ ವರದಿಯನ್ನು ಸಂಬಂಧಪಟ್ಟ ಸರಕಾರಿ (ಲೋಕೋಪಯೋಗಿ ಇಲಾಖೆಯ) ಅಥವಾ ಖಾಸಗಿ ಇಂಜಿನಿಯರ್ನಿಂದ ಅಂತೆಯೆ ಕೃಷಿ ಮತ್ತು ಮರಗಳಿಗೆ ಸಂಬಂಧಪಟ್ಟ ವಿಷಯದ ಕುರಿತು ಕೃಷಿ ಇಲಾಖೆಯ ಅಥವಾ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮತ್ತು ಇತರ ಯಾವುದೇ ಸ್ವರೂಪದ ವಿವಾದಗಳಿಗೆ ಸಂಬಂಧಪಟ್ಟಂತೆ ಆಯಾಯ ವಿಷಯದಲ್ಲಿ ಪರಿಣತಿ ಹೊಂದಿರುವ ಖಾಸಗಿ ಅಥವಾ ಇಲಾಖೆಯ ತಜ್ಞರಿಂದ ಸೂಕ್ತ ವರದಿಯನ್ನು ಪಡೆಯುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ.













































