ಪುತ್ರ ಅಬ್ದುಲ್ಲ, ಪತ್ನಿ ಫಾತಿಮಾಗೂ ಜೈಲು
ಲಖನೌ: ಚುನಾವಣೆಗೆ ಸ್ಪರ್ಧಿಸಲು ನಕಲಿ ಜನನ ಪ್ರಮಾಣಪತ್ರ ಸಲ್ಲಿಸಿದ ಪ್ರಕರಣದಲ್ಲಿ ಎಸ್ಪಿ ನಾಯಕ ಆಜಂ ಖಾನ್, ಅವರ ಪುತ್ರ ಅಬ್ದುಲ್ಲಾ ಆಜಂ ಮತ್ತು ಪತ್ನಿ ತಂಝೀಮ್ ಫಾತಿಮಾಗೆ ನ್ಯಾಯಾಲಯ ತಲಾ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ರಾಮ್ಪುರದ ಎಂಪಿ-ಎಂಎಲ್ಎಲ್ ನ್ಯಾಯಾಲಯವು ವಿಚಾರಣೆಯ ನಂತರ ತೀರ್ಪು ನೀಡಿ ಮೂವರನ್ನೂ ನೇರವಾಗಿ ಜೈಲಿಗೆ ಕಳುಹಿಸಲು ಆದೇಶಿಸಿದೆ.
2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಬ್ದುಲ್ಲಾ ರಾಂಪುರದ ಸ್ವರ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರು ಚುನಾವಣಾ ನಮೂನೆಯಲ್ಲಿ ನಮೂದಿಸಿದ್ದ ವಯಸ್ಸು ನಕಲಿಯಾಗಿತ್ತು. ಬಿಜೆಪಿ ಶಾಸಕ ಆಕಾಶ್ ಸಕ್ಸೇನಾ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 420, 467, 468 ಮತ್ತು 471ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಆಜಂ ಖಾನ್, ಅಬ್ದುಲ್ಲಾ ಮತ್ತು ತಂಝೀಮ್ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಅಬ್ದುಲ್ಲಾ ಮೊದಲ ಜನನ ಪ್ರಮಾಣಪತ್ರವನ್ನು ವಿದೇಶ ಪ್ರವಾಸಕ್ಕಾಗಿ ಪಡೆದಿದ್ದರೆ, ಎರಡನೆಯದು ಸರ್ಕಾರಿ ಕೆಲಸ ಮತ್ತು ಜೌಹರ್ ವಿಶ್ವವಿದ್ಯಾಲಯಕ್ಕಾಗಿ ಮಾಡಲ್ಪಟ್ಟಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಎಲ್ಲವನ್ನೂ ಯೋಜಿತ ಪಿತೂರಿಯ ಅಡಿಯಲ್ಲಿ ಮಾಡಲಾಗಿದೆ. 2012ರ ಜೂನ್ 28ರಂದು ರಾಂಪುರ ಪುರಸಭೆಯಿಂದ ಮೊದಲ ಜನ್ಮ ಪ್ರಮಾಣಪತ್ರವನ್ನು ನೀಡಲಾಗಿದ್ದು, ಅದರಲ್ಲಿ ಅವರ ಜನ್ಮ ಸ್ಥಳವನ್ನು ರಾಂಪುರ ಎಂದು ನಮೂದಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಎರಡನೇ ಜನನ ಪ್ರಮಾಣಪತ್ರವನ್ನು 2015ರ ಜನವರಿಯಲ್ಲಿ ಲಖನೌದಲ್ಲಿ ಪಡೆಯಲಾಗಿತ್ತು. ಇದರಲ್ಲಿ ಅವರ ಜನ್ಮ ಸ್ಥಳವನ್ನು ಲಖನೌ ಎಂದು ತೋರಿಸಲಾಗಿದೆ. ಈ ಪ್ರಕರಣದಲ್ಲಿ ಆಕಾಶ್ ಸಕ್ಸೇನಾ ಅವರು 2019ರಲ್ಲಿ ಲಖನೌದ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಮ್ಪುರದ ಎಂಪಿ-ಎಂಎಲ್ಎಲ್ ನ್ಯಾಯಾಲಯದಲ್ಲಿ ನಾಲ್ಕು ವರ್ಷಗಳ ಸುದೀರ್ಘ ಪ್ರಕರಣದಲ್ಲಿ 30ಕ್ಕೂ ಹೆಚ್ಚು ಸಾಕ್ಷಿಗಳು ಸಾಕ್ಷ್ಯ ನುಡಿದರು. ಅಗತ್ಯ ಸಂಬಂಧಿತ ದಾಖಲೆಗಳನ್ನು ಎರಡೂ ಕಡೆಯವರು ಮಂಡಿಸಿದರು. ಈ ವೇಳೆ ಅಬ್ದುಲ್ಲಾ ಅವರ ವಿಧಾನಸಭೆ ಸದಸ್ಯತ್ವ ರದ್ದಾಗಿದೆ.









































