ಹಿಂದೂ ವಿರೋಧಿ ನೀತಿಯ ಪರಾಕಾಷ್ಠೆ ಎಂದು ಬಿಜೆಪಿ ಆಕ್ರೋಶ
ಬೆಂಗಳೂರು : ಆಯುಧ ಪೂಜೆ ಮಾಡುವಾಗ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಕುಂಬಳಕಾಯಿ ಒಡೆಯಬಾರದು, ರಂಗೋಲಿ ಬಿಡಿಸಬಾರದು ಮತ್ತು ಕುಂಕುಮ, ಅರಿಶಿನ ಮತ್ತಿತರ ವಸ್ತುಗಳನ್ನು ಬಳಸಬಾರದು ಎಂದು ಆದೇಶಿಸಿ ಸರ್ಕಾರ ಹೊರಡಿಸಿದ ಸುತ್ತೋಲೆ ಭಾರಿ ಟೀಕೆಗೆ ಗುರಿಯಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಇನ್ನೊಂದು ಸೆರ್ಪಡೆ ಎಂದು ಬಿಜೆಪಿ ಕಿಡಿಕಾರಿದೆ. ಸಂಸದ ತೇಜಸ್ವಿ ಸೂರ್ಯ ಸಹಿತ ಹಲವು ಬಿಜೆಪಿ ನಾಯಕರು ಈ ಸುತ್ತೋಲೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ನಾವಿರುವುದು ಕರ್ನಾಟಕದಲ್ಲಾ ತಾಲಿಬಾನ್ ಆಡಳಿತದಲ್ಲಾ ಎಂದು ಪ್ರಶ್ನಿಸಿದ್ದಾರೆ.
ಎರಡು ರಾಜ್ಯ, ಎರಡು ರಾಜ್ಯ ಸರ್ಕಾರಗಳು. ಆದರೆ ಒಂದೇ ಗುರಿ ಅದು ಆಯುಧ ಪೂಜೆ. ಇಂಡಿ ಮೈತ್ರಿ ಪಕ್ಷಗಳ ನಡುವೆ ನೂರು ಭಿನ್ನಾಭಿಪ್ರಾಯಗಳಿರಬಹುದು, ಆದರೆ ಅವರು ಈ ನೆಲದ ಸ್ಥಳೀಯ ಸಂಸ್ಕೃತಿಯ ಮೇಲಿನ ದ್ವೇಷ ಮತ್ತು ತಿರಸ್ಕಾರದ ವಿಚಾರದಲ್ಲಿ ಮಾತ್ರ ಖಂಡಿತವಾಗಿ ಒಂದಾಗುತ್ತಾರೆ. ಆಯುಧ ಪೂಜೆಯ ಸಮಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹೂವುಗಳು, ಕುಂಕುಮ, ಅರಿಶಿನ ಮತ್ತು ಇತರ ಪೂಜೆ ಅಗತ್ಯ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಿ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಎರಡೂ ಸರ್ಕಾರಿ ಸುತ್ತೋಲೆಯನ್ನು ಹೊರಡಿಸಿದೆ. ವರ್ಷಗಳಿಂದ ದಕ್ಷಿಣ ಭಾರತದ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಉದ್ಯೋಗಿಗಳು ಆಯುಧ ಪೂಜೆಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ಮಹತ್ವದ ಸಾಂಸ್ಕೃತಿಕ ಆಚರಣೆಗೆ ಇದೀಗ ಇಂಡಿ ಒಕ್ಕೂಟ ತನ್ನ ಟಾರ್ಗೆಟ್ ಮಾಡಿಕೊಂಡಿದೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ಆಯುಧ ಪೂಜೆ ಸಂದರ್ಭದಲ್ಲಿ ವಿಧಾನ ಸೌಧ, ವಿಕಾಸ ಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಅರಿಶಿಣ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
























