ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

ಸೇವಾ ಭಾವನೆ ಜೀವನದ ಉತ್ಕರ್ಷಕ್ಕೆ ಭದ್ರ ಬುನಾದಿ – ಸುನಿಲ್‌ ಕುಮಾರ್

ಕಾರ್ಕಳ : ಬದುಕಿನಲ್ಲಿ ಸೇವಾ ಮನೋಭಾವನೆ ಹಾಗೂ ಸಹಬಾಳ್ವೆಯನ್ನು ಮೈಗೂಡಿಸಿಕೊಳ್ಳಲು ಎನ್ಎಸ್ಎಸ್ ಸಹಕಾರಿ ಎಂದು ಶಾಸಕ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು. ಅವರು ಕ್ರಿಯೇಟಿವ್ ಪ.ಪೂ ಕಾಲೇಜು ವತಿಯಿಂದ ಹಿರ್ಗಾನದ ಬಿ.ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸುಲೋಚನಾ ಸುಂದರ ಶೆಟ್ಟಿ ಕಲಾ ವೇದಿಕೆಯಲ್ಲಿ ನಡೆದ ಕಾಲೇಜಿನ ಎನ್ಎಸ್ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸೇವಾ ಭಾವನೆ ಜೀವನದ ಉತ್ಕರ್ಷಕ್ಕೆ ಭದ್ರ ಬುನಾದಿಯಾಗಿದೆ. ಪಠ್ಯದ ಜೊತೆಗೆ ಪಠ್ಯತರ ಚಟುವಟಿಕೆಗೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತಿದೆ ಎಂದರು. ಕ್ರಿಯೇಟಿವ್‌ ಕಾಲೇಜು ಎನ್ಎಸ್ಎಸ್ ಶಿಬಿರ ಆಯೋಜನೆ ಮೂಲಕ ಊರಿನ ಹಬ್ಬವನ್ನಾಗಿ ಆಚರಿಸುವುದು ಅಭಿನಂದನಾರ್ಹ. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಸಂಸ್ಥೆ ರಾಜ್ಯದ ಗಮನ ಸೆಳೆಯುತ್ತಿರುವುದು ಸಂತಸ ಎಂದರು.

ಮಂಗಳೂರು ವಿಭಾಗದ ರಾ.ಸೇ.ಯೋ ಪ್ರಾಂತೀಯ ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಮಾತನಾಡಿ, ಸರಳ ಜೀವನ ರೂಪಿಸುವ ಶೈಲಿ ಎನ್ಎಸ್ಎಸ್ ರೂಪಿಸುತ್ತದೆ. ಅನುಭವ ಮತ್ತು ಪರಿಶ್ರಮಕ್ಕೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚು ಗಮನ ಹರಿಸಲಾಗಿದೆ. ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ ಇದರಿಂದ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಪ್ರತಿಫಲಾಪೇಕ್ಷೆ ಸಮಾಜಕ್ಕಾಗಿ ಕಾರ್ಯನಿರ್ವಹಿಸುವ ಸೇವಾ ಮನೋಭಾವವನ್ನು ಎನ್ಎಸ್ಎಸ್ ಕಲಿಸಿಕೊಡುತ್ತದೆ. ತನ್ಮೂಲಕ ವಿದ್ಯಾರ್ಥಿಗಳಲ್ಲಿ ಹೊಸತನ ಮೇಳೈಸಲಿ ಎಂದು ಅವರು ಶುಭ ಹಾರೈಸಿದರು. ಕಾಲೇಜು ಸಹಸಂಸ್ಥಾಪಕ ಡಾ. ಬಿ. ಗಣನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜು ಆರಂಭವಾದ ಕೇವಲ ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಯ ಸೇವಾ ಯೋಜನ ಘಟಕ ಆರಂಭವಾಗಿರುವುದು ಅಭಿನಂದನಾರ್ಹ. ಅದಕ್ಕೆ ಶ್ರಮಿಸಿದ ವಿಭಾಗೀಯ ಅಧಿಕಾರಿಗಳ ತಂಡದ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ ಶೆಟ್ಟಿ ಮಾತನಾಡಿ, ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಸಮಾಜದಲ್ಲಿ ತಮ್ಮನ್ನು ತೊಡಗಿಸಿಕೊಳ್ಳು ಎನ್‌ಎಸ್‌ಎಸ್‌ ಉತ್ತಮ ವೇದಿಕೆ ಎಂದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹಾವೀರ ಕಟ್ಟಡ, ಶಾಲೆಯ ಮುಖ್ಯ ಶಿಕ್ಷಕಿ ಆಶಾ ಕೇರಾ ವಾಸ್, ಪ್ರಗತಿಪರ ಕೃಷಿಕ ಸರ್ವೋತ್ತಮ ಕಡಂಬ ಉಪಸ್ಥಿತರಿದ್ದರು. ಸಾನ್ವಿ ಮತ್ತು ಬಳಗದವರು ಪ್ರಾರ್ಥಿಸಿದರು. ಕಾಲೇಜಿನ ರಾ.ಸೇ.ಯೋ ಸಂಯೋಜನಾಧಿಕಾರಿ ಉಮೇಶ್ ಸ್ವಾಗತಿಸಿದರು. ಉಪನ್ಯಾಸಕ ಲೋಹಿತ್ ಎಸ್. ಕೆ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಪ್ರಿಯಾಂಕ ವಂದಿಸಿದರು.

ಶಿಬಿರದ ಕಾರ್ಯಕ್ರಮಗಳು
ಅ. 13 ರಂದು ಮಧ್ಯಾಹ್ನ 3 ರಿಂದ 4.30 ಗಂಟೆಯವರೆಗೆ ಕಾರ್ಕಳ ಚಿತ್ತಾರ ಕಲಾ ಶಾಲೆಯ ಸುಜೇಂದ್ರ ಅವರಿಂದ ಕರಕುಶಲ ಕಾರ್ಯಾಗಾರ, ಸಂಜೆ 6 ರಿಂದ 8.30 ರವರೆಗೆ ಕ್ರಿಯೇಟಿವ್‌ ಯಕ್ಷರಾಧನಮ್‌ ಕಲಾವಿದರಿಂದ ಶ್ರೀ ಕೃಷಕಾರುಣ್ಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಅ. 14 ರಂದು ಮಧ್ಯಾಹ್ನ 3 ರಿಂದ 4.30 ಗಂಟೆಯವರೆಗೆ ನಿಟ್ಟೆ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಅಕ್ಷಯಾ ಗೋಖಲೆ ಅವರಿಂದ ಯುವಜನರಲ್ಲಿ ನೈತಿಕ ಮೌಲ್ಯದ ಮಹತ್ವ ಕುರಿತು ಮಾಹಿತಿ, ಸಂಜೆ 6 ರಿಂದ 8.30 ರವರೆಗೆ ಶ್ರೀ ವಾಗ್ದೇವಿ ಯಕ್ಷಗಾನ ಕಲಾ ಮಂಡಳಿ ಮತ್ತು ಬಂಡೀಮಠ ಶ್ರೀ ಮೂಡು ಮಹಾಗಣಪತಿ ದೇವಸ್ಥಾನದವರಿಂದ ಬೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಅ. 15 ರಂದು ಮಧ್ಯಾಹ್ನ 3 ರಿಂದ 4.30 ಗಂಟೆಯವರೆಗೆ ಕಾರ್ಕಳ ಠಾಣಾಧಿಕಾರಿ ಸಂತೋಷ್‌ ಶೆಟ್ಟಿಯವರಿಂದ ಕಾನೂನು ಅರಿವು ಮತ್ತು ಆರೋಗ್ಯ ಪಾಲನೆ ಕುರಿತು ಮಾಹಿತಿ, ಸಂಜೆ 6 ರಿಂದ 8.30 ರವರೆಗೆ ಪಲ್ಲವಿ ಕಲಾವಿದರಿಂದ ಹಾಸ್ಯಮಯ ನಾಟಕ ಕಲ್ಯಾಣ ದಿಬ್ಬಣ ಪ್ರದರ್ಶನಗೊಳ್ಳಲಿದೆ.

ಅ. 16 ರಂದು ಮಧ್ಯಾಹ್ನ 3 ರಿಂದ 4.30 ಗಂಟೆಯವರೆಗೆ ಆಳ್ವಾಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್‌ ಅವರಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬೆಳವಣಿಗೆ ಕುರಿತು ಮಾಹಿತಿ, ಸಂಜೆ 6 ರಿಂದ 8.30 ರವರೆಗೆ ಕ್ರಿಯೇಟಿವ್‌ ಪಿಯು ಕಾಲೇಜು, ಉಡುಪಿ ತ್ರಿಶಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಬಿರಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಅ. 17 ರಂದು ಮಧ್ಯಾಹ್ನ 3 ರಿಂದ 4.30 ಗಂಟೆಯವರೆಗೆ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕ ಡಾ. ಮಹೇಶ್‌ ಕುಮಾರ್‌ ಸಾಣೂರು ಅವರಿಂದ ವಿವೇಕಾನಂದರ ಚಿಂತನೆಗಳು ಕುರಿತು ಮಾತು, ಸಂಜೆ 6 ರಿಂದ 8.30 ರವರೆಗೆ ಬಿ.ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಅ. 18 ರಂದು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.





























































































































error: Content is protected !!
Scroll to Top