ಕ್ರಿಮಿನಲ್ ಪ್ರಕರಣದ ತನಿಖೆಯಲ್ಲಿ ಕರ್ತವ್ಯನಿರತ ಪೋಲೀಸ್ ಅಧಿಕಾರಿಯ ಮಹತ್ವಪೂರ್ಣ ಜವಾಬ್ದಾರಿಗಳು

ಕ್ರಿಮಿನಲ್ ಪ್ರಕರಣದಲ್ಲಿ ಸಂಬಂಧಪಟ್ಟ ಅಪರಾಧಿಗೆ ಕಾನೂನಿನ ನಿಯಮಾನುಸಾರವಾಗಿ ನ್ಯಾಯಾಲಯದ ಮುಖಾಂತರ ಶಿಕ್ಷೆಯನ್ನು ಕೊಡಿಸುವಲ್ಲಿ ಪ್ರಕರಣದ ತನಿಖೆಯನ್ನು ನಡೆಸುವ ಪೋಲೀಸ್ ಅಧಿಕಾರಿಯ ಜವಾಬ್ದಾರಿ ಅತ್ಯಂತ ಮಹತ್ವಪೂರ್ಣದ್ದಾಗಿರುತ್ತದೆ. ಕ್ರಿಮಿನಲ್ ಪ್ರಕರಣದ ತನಿಖೆಯನ್ನು ನಡೆಸುವ ಪೋಲೀಸ್ ಅಧಿಕಾರಿಯನ್ನು ತನಿಖಾಧಿಕಾರಿ ಎನ್ನುತ್ತಾರೆ. ಯಾವುದೇ ಪೋಲೀಸ್ ಠಾಣೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಪೋಲೀಸ್ ಅಧಿಕಾರಿಯನ್ನು ಠಾಣಾಧಿಕಾರಿ ಎನ್ನುತ್ತಾರೆ.

ಕ್ರಿಮಿನಲ್ ಪ್ರಕರಣದಲ್ಲಿ ಕೃತ್ಯದ ಬಗ್ಗೆ ಮಾಹಿತಿ ಪಡೆದ ಪೋಲೀಸ್ ಠಾಣಾಧಿಕಾರಿಯು ಮಾಹಿತಿಯ ವಿವರವನ್ನು ಠಾಣೆಯ ದೈನಿಕ ದಿನಚರಿಯಲ್ಲಿ
ನಮೂದಿಸಿಕೊಂಡು ಪ್ರಥಮ ವರ್ತಮಾನ ವರದಿಯನ್ನು ತಯಾರಿಸಿ, ತಡಮಾಡದೇ ಕೃತ್ಯಕ್ಕೆ ಸಂಬಂಧಪಟ್ಟ ಸರಹದ್ದಿನ ನ್ಯಾಯಾಂಗ ಮ್ಯಾಜಿಸ್ಟ್ರೇಟರಿಗೆ ಹಾಗೂ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಕಳುಹಿಸುವುದು ಕಡ್ಡಾಯವಾದ ನಿಯಮವಾಗಿರುತ್ತದೆ. ಈ ರೀತಿಯಾಗಿ ಪ್ರಥಮ ವರ್ತಮಾನ ವರದಿಯನ್ನು ನಮೂದಿಸದೆ ಪೋಲೀಸ್ ಅಧಿಕಾರಿಯು ತನ್ನ ತನಿಖೆಯನ್ನು ಪ್ರಾರಂಭಿಸಿದಲ್ಲಿ ಅಥವಾ ಸ್ಥಳಕ್ಕೆ ಭೇಟಿ ನೀಡಿದಲ್ಲಿ ಅದು ಕಾನೂನು ಬಾಹಿರವಾಗಿರುತ್ತದೆ.

ಪೋಲೀಸ್ ತನಿಖಾಧಿಕಾರಿಯು ಕೃತ್ಯದ ಬಗ್ಗೆ ಪ್ರಥಮ ವರ್ತಮಾನ ವರದಿಯನ್ನು ನಮೂದಿಸಿಕೊಳ್ಳದೆ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ಅದರಲ್ಲಿಯೂ
ಆರೋಪಿಗಳೊಂದಿಗೆ ಮಾತುಕತೆ ಅಥವಾ ಸಮಾಲೋಚನೆ ನಡೆಸುವಂತಿಲ್ಲ. ಪೋಲೀಸರಿಗೆ ಕೃತ್ಯದ ಬಗ್ಗೆ ಮಾಹಿತಿಯನ್ನು ನೀಡುವಲ್ಲಿ ಮಾಹಿತಿದಾರರು ಯಾವುದೇ ವಿಳಂಬವನ್ನು ಮಾಡಬಾರದು. ಒಂದು ವೇಳೆ ಮಾಹಿತಿಯನ್ನು ನೀಡುವಲ್ಲಿ ಯಾವುದೇ ವಿಳಂಬವಾದಲ್ಲಿ ಸಂಬಂಧಪಟ್ಟ ಪೋಲೀಸ್
ಠಾಣಾಧಿಕಾರಿಯು ಈ ಕುರಿತು ಸೂಕ್ತ ಕಾರಣವನ್ನು ಕೇಳಿ ಪಡೆದುಕೊಂಡು ಅದನ್ನು ಪ್ರಥಮ ವರ್ತಮಾನ ವರದಿಯಲ್ಲಿ ನಮೂದಿಸಬೇಕಾಗುತ್ತದೆ.

ಕರ್ತವ್ಯನಿರತ ಠಾಣಾಧಿಕಾರಿಯು ತಾನು ಪಡೆಯುವ ಮೊದಲ ಮಾಹಿತಿ ವರದಿಯಲ್ಲಿ ಸರಿಯಾದ ಮತ್ತು ಸತ್ಯವಾದ ದಿನಾಂಕ ಮತ್ತು ವೇಳೆಯನ್ನು ನಮೂದಿಸಬೇಕು. ಅಂದರೆ ಹಿಂದಿನ ದಿನಾಂಕವನ್ನು ನಮೂದಿಸಬಾರದು. ಆಪಾದಿತರೆಂದು ಪರಿಗಣಿಸಲ್ಪಡುವ ಪರಿಚಿತ ದೋಷಿಗಳ ಹೆಸರುಗಳನ್ನು ಪ್ರಥಮ ಮಾಹಿತಿ ವರದಿಯಲ್ಲಿ ನಮೂದಿಸುವುದು ಪೋಲೀಸ್ ಠಾಣಾಧಿಕಾರಿಯವರ ಕರ್ತವ್ಯವಾಗಿರುತ್ತದೆ. ಅದೇ ರೀತಿ ಪರಿಚಿತ ಪ್ರತ್ಯಕ್ಷ ಸಾಕ್ಷಿಗಳ ಹೆಸರು ವಿವರವನ್ನು ಮತ್ತು ಕೃತ್ಯಕ್ಕೆ ಆರೋಪಿಗಳು ಬಳಸಿದ ಆಯುಧಗಳ ವಿವರ ಪ್ರಥಮ ಮಾಹಿತಿ ವರದಿಯಲ್ಲಿ ನಮೂದಿಸಬೇಕು.

ಹಲ್ಲೆಗೊಳಗಾದ ಸಮಯದಲ್ಲಿ ಮ್ರತನು ಅಥವಾ ಗಾಯಗೊಂಡವನು ಇದ್ದ ಸ್ಥಿತಿಯನ್ನು ಪ್ರಥಮ ಮಾಹಿತಿ ವರದಿಯಲ್ಲಿ ನಮೂದಿಸಬೇಕು. ಅಂತೆಯೇ ಕೃತ್ಯ ನಡೆದ ಸ್ಥಳದ ಮತ್ತು ಆರೋಪಿಯು ಅಪರಿಚಿತನಾದಲ್ಲಿ ಆತನ ಬಾಹ್ಯ ಲಕ್ಷಣಗಳನ್ನು ಮತ್ತು ಮಾಹಿತಿದಾರರು ಅಪರಾಧಿಕ ಕೃತ್ಯವು ನಡೆದ ಸಂದರ್ಭದಲ್ಲಿ ಇದ್ದ ಬೆಳಕಿನ ಮೂಲವನ್ನು ಮೊದಲ ಮಾಹಿತಿ ವರದಿಯಲ್ಲಿ ನಮೂದಿಸುವುದನ್ನು ತಪ್ಪಿಸಬಾರದು.







































error: Content is protected !!
Scroll to Top