ಹಾಲು ಕಡೆಗಣನೆ ಆಲ್ಕೋಹಾಲ್‌ಗೆ ಪ್ರೋತ್ಸಾಹ : ನರಸಿಂಹ ಕಾಮತ್ ಟೀಕೆ

1 ಸಾವಿರ ಮದ್ಯದಂಗಡಿ ತೆರೆಯುವ ನಿರ್ಧಾರ ಅನಾಹುತಕಾರಿ ಎಂದು ಕಳವಳ

ಕಾರ್ಕಳ : ರಾಜ್ಯ ಸರಕಾರ ಒಂದು ಸಾವಿರ ಹೊಸ ಮದ್ಯದ ಅಂಗಡಿಗಳನ್ನು ತೆರೆಯಲು ಮುಂದಾಗಿರುವುದು ತೀರಾ ಖಂಡನೀಯ. ಸಂಪನ್ಮೂಲ ಕ್ರೋಡೀಕರಣಕ್ಕೆ ಒಂದೆಡೆ ಆಲ್ಕೋಹಾಲನ್ನು ಪ್ರೋತ್ಸಾಹಿಸುವ ರಾಜ್ಯ ಸರಕಾರ, ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಲಕ್ಷಾಂತರ ಕುಟುಂಬಗಳ ಹಿತವನ್ನು ಕಡೆಗಣಿಸಿ ಹಾಲಿನ ಕ್ಷೇತ್ರದ ಸಮಸ್ಯೆಗಳ ಕಡೆಗೆ ಲಕ್ಷ್ಯ ಹರಿಸುತ್ತಿಲ್ಲ ಎಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಠದ ಸಂಚಾಲಕ ಸಾಣೂರು ನರಸಿಂಹ ಕಾಮತ್‌ ಹೇಳಿದ್ದಾರೆ.

ಮಾಲ್‌ಗಳಲ್ಲಿ ದಿನಬಳಕೆ ವಸ್ತುಗಳ ಜತೆಗೆ ಸುಲಭವಾಗಿ ಆಲ್ಕೋಹಾಲ್ ಲಭ್ಯವಾಗುವಂತೆ ಹೊಸ ಲೈಸೆನ್ಸ್ ವಿತರಿಸಲು ಸಿದ್ಧತೆ ಮಾಡಿಕೊಂಡಿರುವ ಸರಕಾರ ವ್ಯಸನಮುಕ್ತ ಸಮಾಜ ನಿರ್ಮಾಣದ ಆಶಯಕ್ಕೆ ಎಳ್ಳುನೀರು ಬಿಡುವಂತೆ ಕಾಣುತ್ತಿದೆ. ಈ ಬಾರಿ ಮುಂಗಾರು, ಹಿಂಗಾರು ಮಳೆ ಸಾಕಷ್ಟು ಸುರಿಯದೆ ಇಡೀ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ಪಶುಗಳಿಗೆ ಮೇವಿನ ಕೊರತೆ, ಪಶು ಆಹಾರದ ಬೆಲೆ ಏರಿಕೆ, ಸಣ್ಣ ಹಿಡುವಳಿದಾರ ರೈತರಿಗೆ ಹಸಿರು ಮೇವು ಬೆಳೆಸಲು ಜಾಗದ ಕೊರತೆ, ವಿದ್ಯುತ್ ದರ, ಕೂಲಿಯಾಳುಗಳ ಸಂಬಳ ಏರಿಕೆ, ಪಶುವೈದ್ಯರ ಕೊರತೆ, ಔಷಧಿ ಮತ್ತು ಚಿಕಿತ್ಸಾ ದರದಲ್ಲಿ ಏರಿಕೆ ಮುಂತಾದ ಹಲವಾರು ಸಮಸ್ಯೆಗಳಿಂದ ನಲುಗುತ್ತಿರುವ ಹೈನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕವಾದ ಯೋಜನೆ ಮತ್ತು ಅನುದಾನಗಳನ್ನು ನೀಡಲು ಸರಕಾರವು ಗಮನ ಹರಿಸದೆ ಜನರ ದುಡಿಮೆಯ ಹಣವನ್ನು ಮದ್ಯದಂಗಡಿಗಳ ಕಡೆಗೆ ಸೆಳೆಯಲು ಯೋಜನೆ ರೂಪಿಸುತ್ತಿರುವುದು ವಿಪರ್ಯಾಸಕರ ಎಂದಿದ್ದಾರೆ.

ಸರಕಾರ ಮದ್ಯದ ಹೊಳೆ ಹರಿಸಲು ಮುಂದಾಗಿ ಇನ್ನೊಂದೆಡೆ ಹೈನುಗಾರಿಕಾ ಕ್ಷೇತ್ರವನ್ನು ಕಡೆಗಣಿಸಿದರೆ ಹಾಲಿನ ಅಭಾವ ತಲೆದೋರಿ ಮತ್ತೊಂದು ಸಮಸ್ಯೆ ಊಂಟಾದೀತು ಎಂದು ಎಚ್ಚರಿಸಿರುವ ಅವರು ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ಸಾವಿರಾರು ಎಕರೆ ಗೋಮಾಳ ಭೂಮಿ ಲಭ್ಯವಿದ್ದು, ಜಿಲ್ಲಾಧಿಕಾರಿಗಳ ಮೂಲಕ ಹೈನುಗಾರರಿಗೆ ಹಸಿರು ಮೇವು ಬೆಳೆಸಲು ಈ ಭೂಮಿಯನ್ನು ಒದಗಿಸಿದರೆ ಮೇವಿನ ಕೊರತೆಯನ್ನು ನೀಗಿಸಿ ಹೈನುಗಾರಿಕೆಗೆ ಪ್ರೋತ್ಸಾಹವನ್ನು ನೀಡಿದಂತಾಗುವುದು ಎಂದು ಸಲಹೆ ನೀಡಿದ್ದಾರೆ.





























































































































error: Content is protected !!
Scroll to Top