ಮೃತರ ಸಂಖ್ಯೆ 21ಕ್ಕೇರಿಕೆ, 7 ಯೋಧರ ಶವ ಪತ್ತೆ
ಗ್ಯಾಂಗ್ಟಕ್ : ಉತ್ತರ ಸಿಕ್ಕಿಂನ ಲ್ಹೋನಕ್ ಸರೋವರದ ಬಳಿ ಮೇಘಸ್ಫೋಟದಿಂದ ಉಂಟಾದ ಪ್ರವಾಹದಲ್ಲಿ ಒಂದು ಅಣೆಕಟ್ಟೆ ಮತ್ತು 13 ಸೇತುವೆಗಳು ಕೊಚ್ಚಿಹೋಗಿವೆ. ಮೇಘಸ್ಫೋಟದಿಂದ ತೀಸ್ತಾ ನದಿಯಲ್ಲಿ ಬುಧವಾರ ರಾತ್ರಿ ಹಠಾತ್ ಪ್ರವಾಹ ಉಕ್ಕೇರಿ ಯೋಧರ ಸಹಿತ 21 ಮಂದಿ ಮೃತಪಟ್ಟಿದ್ದು 100ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ನಾಪತ್ತೆಯಾಗಿರುವ 22 ಸೈನಿಕರ ಪೈಕಿ 7 ಮಂದಿಯ ಮೃತದೇಹ ಸಿಕ್ಕಿದೆ, ಓರ್ವನನ್ನು ಪಾರು ಮಾಡಲಾಗಿದೆ. ಉಳಿದವರನ್ನು ಹುಡುಕಲಾಗುತ್ತಿದೆ.
ಸಿಕ್ಕಿಂನ ಚುಂಗ್ತಾಂಗ್ ಅಣೆಕಟ್ಟೆ ಕೊಚ್ಚಿಹೋಗಿದೆ. ಇದು ಕಳಪೆ ಕಾಮಗಾರಿಯ ಅಣೆಕಟ್ಟೆಯಾದುದರಿಂದ ದುರಂತ ಸಂಭವಿಸಿದೆ ಎಂದು ಮುಖ್ಯಮಂತ್ರಿ ಪ್ರೇಮ್ಸಿಂಗ್ ತಮಂಗ್ ಆರೋಪಿಸಿದ್ದಾರೆ.

ಮೇಘಸ್ಫೋಟದಿಂದ ಲ್ಹೋನಕ್ ಸರೋವರಕ್ಕೆ ಅಗಾಧ ಪ್ರಮಾಣದ ನೀರು ನುಗ್ಗಿ ಬಂದ ಪರಿಣಾಮ ಅದಕ್ಕೆ ಕಟ್ಟಿದ್ದ ಅಣೆಕಟ್ಟೆ ನೀರು ಪಾಲಾಗಿದೆ. ನಂತರ ಕೆಳಭಾಗಕ್ಕೆ ಹರಿದ ನೀರಿನಿಂದಾಗಿ ಪಟ್ಟಣ ಮತ್ತು ಜನವಸತಿ ಪ್ರದೇಶಗಳು ಮುಳುಗಿ ಅಪಾರ ನಾಶನಷ್ಟ ಸಂಭವಿಸಿದೆ. ಸಾವಿರಾರು ಮಂದಿ ನಿರ್ವಸಿತರಾಗಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ. ಸಿಕ್ಕಿಂನಿಂದ ಉತ್ತರಕ್ಕಿರುವ ರಾಜ್ಯಗಳ ಸಂಪರ್ಕ ಪೂರ್ತಿಯಾಗಿ ಕಡಿದುಹೋಗಿದೆ.
ಪ್ರವಾದಲ್ಲಿ 13 ಸೇತುವೆಗಳು ಕೊಚ್ಚಿ ಹೋಗಿರುವುದರಿಂದ ಪರಿಹಾರ ಕಾರ್ಯಕ್ಕೆ ಬಹಳ ತೊಡಕಾಗಿದೆ. ಚುಂಗ್ತಾಂಗ್ ಪಟ್ಟಣ ಅತಿ ಹೆಚ್ಚು ಹಾನಿಗೊಳಗಾಗಿದೆ. ಸಿಂಗ್ತಾಮ್ ಬಳಿ ಬುರ್ದಾಂಗ್ನಲ್ಲಿ ಮಣ್ಣಿನಲ್ಲಿ ಮುಳುಗಿರುವ ವಾಹನಗಳನ್ನು ರಕ್ಷಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ನಾಪತ್ತೆಯಾದವರ ಶೋಧ ಕಾರ್ಯ ತೀಸ್ತಾ ನದಿಯ ತಗ್ಗು ಪ್ರದೇಶದಲ್ಲಿ ನಡೆಯುತ್ತಿದೆ. ಇಲ್ಲಿಯವರೆಗೆ, 2,011 ಜನರನ್ನು ರಕ್ಷಿಸಲಾಗಿದೆ. ಉತ್ತರ ಸಿಕ್ಕಿಂನ ಲಾಚೆನ್, ಲಾಚುಂಗ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಸಿಕ್ಕಿಂನಲ್ಲಿ, ಕೆಲವು ಹೆಲಿಕಾಪ್ಟರ್ಗಳು ಸ್ಥಳೀಯರಿಗೆ ಅಕ್ಕಿ, ಬೇಳೆಕಾಳು, ಉಪ್ಪು ಮತ್ತು ಹಾಲಿನಂತಹ ಅಗತ್ಯ ಸಾಮಗ್ರಿಗಳನ್ನು ಹೊತ್ತುಕೊಂಡು ಲಾಚೆನ್ಗೆ ಹಾರಿವೆ. ಮಂಗನ್ ಜಿಲ್ಲೆಯಲ್ಲಿ ಸುಮಾರು 10,000 ಜನರು ವಿಪತ್ತಿಗೆ ಒಳಗಾಗಿದ್ದರೆ, ಪಾಕ್ಯೊಂಗ್ನಲ್ಲಿ 6,895 ಜನರು, ನಾಮ್ಚಿಯಲ್ಲಿ 2,579 ಜನರು ಮತ್ತು ಗ್ಯಾಂಗ್ಟಾಕ್ನಲ್ಲಿ 2,570 ಜನರು ಬಾಧಿತರಾಗಿದ್ದಾರೆ.































































