ಗಾಂಧಿ ಸ್ಮಾರಕ ಭವನದಲ್ಲಿ ನೂತನ ಕಚೇರಿ ನಿರ್ಮಾಣಕ್ಕೆ ಮುಂದಾದ ನೀರೆ ಗ್ರಾಮ ಪಂಚಾಯತ್

ಭವನವನ್ನು ಕೆಡವದಂತೆ ಸಾರ್ವಜನಿಕರಿಂದ ಮನವಿ

ಕಾರ್ಕಳ : ನೀರೆ ಗ್ರಾಮ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿರುವ ಬೈಲೂರು ಗಾಂಧಿ ಸ್ಮಾರಕ ಭವನದಲ್ಲಿ ಪಂಚಾಯತ್‌ನ ನೂತನ ಕಚೇರಿಯನ್ನು ನಿರ್ಮಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಇದನ್ನು ವಿರೋಧಿಸಿ ಗಾಂಧಿ ಸ್ಮಾರಕ ಭವನದ ಯಥಾಸ್ಥಿತಿ ಉಳಿಸುವಂತೆ ಅ. 6 ರಂದು ಸಾರ್ವಜನಿಕರು ಪಂಚಾಯತ್‌ ಅಧ್ಯಕ್ಷ ಸಚ್ಚಿದಾನಂದ ಪ್ರಭು ಅವರಿಗೆ ಮನವಿ ಸಲ್ಲಿಸಿದರು.

ಗಾಂಧಿ ಸ್ಮಾರಕ ಭವನ 1952ರಲ್ಲಿ ದಾನಿಗಳ ದೇಣಿಗೆಯಿಂದ ನಿರ್ಮಾಣವಾಗಿದೆ. 71 ವರ್ಷಗಳಿಂದ ಈ ಕಟ್ಟಡವು ಸುಸ್ಥಿತಿಯಲ್ಲಿದ್ದು, ಪಶು ವೈದ್ಯಕೀಯ ಶಿಬಿರ, ಉಚಿತ ನೇತ್ರಾ ಚಿಕಿತ್ಸಾ ಶಿಬಿರ, ನಾಯಿಗಳಿಗೆ ಚುಚ್ಚುಮದ್ದು ಲಸಿಕಾ ಕಾರ್ಯಕ್ರಮ ಸೇರಿದಂತೆ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿರುತ್ತದೆ. ಅಲ್ಲದೆ ಬೈಲೂರು, ಕೌಡೂರು, ನೀರೆ, ಯರ್ಲಪಾಡಿ, ಕಣಂಜಾರು ಗ್ರಾಮಗಳ ಸಾರ್ವಜನಿಕರು ಸೇರಿಕೊಂಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 43 ವರ್ಷಗಳಿಂದ ನಿರಂತರವಾಗಿ ಎರಡು ದಿನಗಳ ಕಾಲ ಇಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಇದೀಗ ಈ ಸ್ಮಾರಕ ಭವನವನ್ನು ನೀರೆ ಗ್ರಾಮ ಪಂಚಾಯತ್ ಕೆಡವಿ ಪಂಚಾಯತ್‌ನ ನೂತನ ಕಚೇರಿಯನ್ನು ನಿರ್ಮಿಸಲು ಮುಂದಾಗಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಈ ಸ್ಮಾರಕ ಭವನವನ್ನು ಯಾವುದೇ ಕಾರಣಕ್ಕೂ ಕೆಡವದೆ ಅದರ ಮೇಲ್ಛಾವಣಿಯನ್ನು ದುರಸ್ಥಿಗೊಳಿಸಿ ಯಥಾಸ್ಥಿತಿಯಾಗಿ ಕಟ್ಟಡವನ್ನು ಉಳಿಸಿಕೊಂಡು ಹಾಗೂ ಇದಕ್ಕೆ ಹೊಂದಿಕೊಂಡಿರುವ ಖಾಲಿ ಸ್ಥಳವನ್ನು ಸಾರ್ವಜನಿಕರಿಗೆ ಈ ಹಿಂದಿನಂತೆಯೇ ಉಪಯೋಗಕ್ಕೆ ಅವಕಾಶ ಮಾಡಿಕೊಡುವಂತೆ ವಿನಂತಿಸಿದರು. ಈ ಸಂದರ್ಭ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಕೃಷ್ಣ ಶೆಟ್ಟಿ, ಸಚ್ಚಿದಾನಂದ ಪ್ರಭು, ಗುರುರಾಜ ಮಾಡ, ಮಹೇಶ್ ಮಾಡ, ಸುಧೀರ್ ಶೆಟ್ಟಿ, ಸುರೇಶ್ ಶೆಟ್ಟಿ, ಸ್ಥಳೀಯರಾದ ದಿಲೀಪ್ ಶೆಟ್ಟಿ, ಮಹಾವೀರ್ ರಾಣೆ, ರಾಜೇಂದ್ರ ಶೆಟ್ಟಿ, ನವೀನ್ ಭಂಡಾರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

























































































































error: Content is protected !!
Scroll to Top