ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಮೂಡುಬಿದಿರೆಯಲ್ಲಿ ಕೋಮು ಗಲಭೆಗೆ ಯತ್ನ
ಮಂಗಳೂರು : ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಮೂಡುಬಿದಿರೆ ಸಮೀಪ ಶಾಂತಿ ಕದಡುವ ಯತ್ನ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೋ ನಿನ್ನೆಯಿಂದೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿ ಪೊಲೀಸರು ತೋರಿದ ದಿಟ್ಟತನದಿಂದಾಗಿ ಕೋಮುಗಲಭೆ ನಡೆಯುವುದು ತಪ್ಪಿದೆ.
ಮೂಡುಬಿದಿರೆಯ ಸಮೀಪ ಪುಚ್ಚೆಮೊಗೇರು ಎಂಬಲ್ಲಿ ಈದ್ ಮಿಲಾದ್ ದಿನವೇ ಕಿಡಿಗೇಡಿಗಳು ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟವಿಟ್ಟು ಹಸಿರು ಬಣ್ಣ ಬಳಿದಿದ್ದರು. ಸೆಪ್ಟೆಂಬರ್ 30ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೂಡಬಿದಿರೆ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ಸಮಯಪ್ರಜ್ಞೆಯಿಂದ ಗಲಭೆ ತಪ್ಪಿದೆ. ಗಣಪತಿ ಕಟ್ಟೆಯಲ್ಲಿ ಹಸಿರು ಧ್ವಜ ಅಳವಡಿಸಿರುವ ಬಗ್ಗೆ ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್ ಗಮನಕ್ಕೆ ತಂದರೂ ಅವರು ಕ್ರಮ ಕೈಗೊಂಡಿರಲಿಲ್ಲ. ಈ ವಿಚಾರ ತಿಳಿದ ಕೂಡಲೇ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಸ್ಥಳಕ್ಕೆ ಭೇಟಿ ನೀಡಿ ಪಿಡಿಒ ಶೇಖರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಗಣಪತಿ ಕಟ್ಟೆ ಮೇಲೆ ಬಾವುಟ ಹಾಕಲಿಕ್ಕೆ ಅನುಮತಿ ತೆಗೊಂಡಿದ್ದಾರಾ? ಎಂದು ಪಿಡಿಒರನ್ನು ಇನ್ಸ್‌ಪೆಕ್ಟರ್ ಕೇಳಿದ್ದಾರೆ.
ನಿನ್ನ ಕೆಲಸ ಏನೂ ಅಂತ ನಿನಗೆ ಗೊತ್ತಿಲ್ಲ, ಏನು ಮಾಡ್ತಾ ಇದೀಯಾ? ಅವರು ಅನುಮತಿ ತೆಗೆದುಕೊಂಡಿಲ್ಲ ಅಂದರೆ ಪೊಲೀಸ್ ದೂರು ಕೊಡಬೇಕು. ಮೊದಲು ಇವನನ್ನೇ ಆರೋಪಿ ಮಾಡಬೇಕು. ನಿನ್ನ ಅಧಿಕಾರ ಏನು ಅಂತ ನಿನಗೆ ಗೊತ್ತಿಲ್ಲ. ನನಗೂ ಇದಕ್ಕೂ ಸಂಬಂಧ ಇಲ್ಲ ಅಂತ ಹೇಳುವ ನೀನ್ಯಾಕೆ ಪಿಡಿಒ ಆಗಿದ್ದೀಯಾ ಎಂದು ಇನ್ಸ್‌ಪೆಕ್ಟರ್ ಗರಂ ಆಗಿದ್ದಾರೆ. ಬಳಿಕ ಇನ್ಸ್‌ಪೆಕ್ಟರ್ ಸಂದೇಶ್ ಪಿ. ಜಿ. ಪೊಲೀಸ್ ಸಿಬ್ಬಂದಿ ಮೂಲಕ ಬಾವುಟ ತೆರವು ಮಾಡಿಸಿದ್ದಾರೆ.































































