ಶಿವಮೊಗ್ಗ ಗಲಭೆಯಲ್ಲಿ ಭಯೋತ್ಪಾದಕ ಸಂಘಟನೆಗಳ ಕೈವಾಡ : ನಳಿನ್‌ ಆರೋಪ

ಹಿಂದೂಗಳನ್ನು ಕೆರಳಿಸಲು ಟಿಪ್ಪು, ಔರಂಗಜೇಬ್ ಕಟೌಟ್‌ ಎಂದ ಬಿಜೆಪಿ ಅಧ್ಯಕ್ಷ

ಶಿವಮೊಗ್ಗ: ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಹಬ್ಬದ ಸಂದರ್ಭದಲ್ಲಿ ನಡೆದ ಕೋಮುಗಲಭೆಯಲ್ಲಿ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.
ನಿನ್ನೆ ಕಟೀಲು ನೇತೃತ್ವದ ನಿಯೋಗ ಗಲಭೆ ಪೀಡಿತ ರಾಗಿಗುಡ್ಡ ಪ್ರದೇಶಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದೆ. ನಂತರ ಮಾಧ್ಯಮದವರ ಜತೆ ಮಾತನಾಡಿದ ಕಟೀಲು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಯುವಕರೇ ಮೆರವಣಿಗೆಯಲ್ಲಿ ಪಾಲ್ಗೊಂಡು ಕೃತ್ಯ ನಡೆಸಿದ್ದಾರೆಂದು ಹೇಳಿದರು. ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂಗಳ ಮನೆ ಮೇಲೆ ನಡೆದಿರುವ ದಾಳಿ ಪೂರ್ವ ನಿಯೋಜಿತ ಕೃತ್ಯ. ಘಟನೆಯ ಪ್ರತ್ಯಕ್ಷದರ್ಶಿಗಳ ಮಾಹಿತಿ ಪಡೆದಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದ ಐದಾರು ಕಡೆಗಳಲ್ಲಿ ಘಟನೆ ನಡೆದಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಈದ್ ಮೆರವಣಿಗೆ ಮೊದಲು ಗಣೇಶ ಚತುರ್ಥಿ ನಡೆದಿತ್ತು. ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ಶಾಂತಿ ರೀತಿಯಲ್ಲಿ ನಡೆದಿದೆ. ರಾಗಿಗುಡ್ಡದಲ್ಲಿ ಗಣೇಶೋತ್ಸವ ನಡೆದ ಮೇಲೆ ಈದ್ ಮೆರವಣಿಗೆ ಮಾಡಲಾಗಿದೆ. ಈದ್ ಮೆರವಣಿಗೆಯ ವೇಳೆ ಹಿಂದೂಗಳನ್ನು ಕೆರಳಿಸಲು ಟಿಪ್ಪು, ಔರಂಗಜೇಬ್, ಅಖಂಡ ಭಾರತದ ಕಟೌಟ್ ನಿರ್ಮಿಸಿ ಸಾಬರ ಸಾಮಾಜ್ಯ ಎಂದು ಹಾಕಿದ್ದಾರೆ. ಇದನ್ನ ತೆರವುಗೊಳಿಸುವಲ್ಲಿ ಪೊಲೀಸ್ ಇಲಾಖೆ ವೈಫಲ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಎಸ್‌ಪಿ ಮೇಲೂ ಕಲ್ಲು ತೂರಲಾಗಿದೆ. ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲವಾಗಿದೆ. ಗಲಭೆ ಸುತ್ತ ಪೊಲೀಸ್ ವೈಫಲ್ಯ ಎದ್ದು ಕಾಣುತ್ತದೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಗಲಭೆ ನಡೆದಿದೆ. ಗಣೇಶೋತ್ಸವದಲ್ಲಿ ಭಾಗಿಯಾದ ಹುಡುಗರ ಮೇಲೆ ಹಲ್ಲೆಯಾಗಿದೆ. ರಕ್ಷಿಸಲು ಬಂದವರ ಮೇಲೂ ಮಾರಾಣಾಂತಿಕ ಹಲ್ಲೆಯಾಗಿದೆ. ಹಿಂದೂಗಳ ಮನೆಗಳಿಗೆ ಕಲ್ಲುತೂರಿದ್ದಾರೆ. ಮುಸ್ಲಿಮರ ಒಂದೇ ಒಂದು ಮನೆಗೆ ಕಲ್ಲು ಬಿದ್ದಿಲ್ಲ. ಈ ಘಟನೆ ಏಕಾಏಕಿ ನಡೆದಿಲ್ಲ. ಇದು ಪೂರ್ವನಿಯೋಜಿತ ಕೃತ್ಯ ಎಂದು ಹರಿಹಾಯ್ದರು.
ಘಟನೆ ವೇಳೆ ಮಹಿಳೆಯರನ್ನು ರಕ್ಷಿಸಲು ಬಂದವರ ಮೇಲೆ ಕೇಸ್ ಹಾಕಲಾಗಿದೆ. ಕ್ರಿಮಿನಲ್ ಹಿನ್ನೆಲೆ ಇಲ್ಲದವರನ್ನು ಜೈಲಿಗೆ ಹಾಕಲಾಗಿದೆ. ಕ್ರಿಶ್ಚಿಯನ್ನರನ್ನೂ ಜೈಲಿಗೆ ಕಳುಹಿಸಲಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ, ಮಂಗಳೂರು, ಭಟ್ಕಳದಲ್ಲಿ ಪಾಕಿಸ್ಥಾನ್ ಜಿಂದಾಬಾದ್‌ ಎಂದು ಘೋಷಿಸಲಾಗಿತ್ತು. ಯಾವ ಕ್ರಮವೂ ತೆಗೆದುಕೊಳ್ಳಲಿಲ್ಲ ಎಂದು ಕಿಡಿಕಾರಿದರು.
ನಮ್ಮ ಸರ್ಕಾರ ಪ್ರವೀಣ್ ನೆಟ್ಟಾರು, ಹರ್ಷನ ಹತ್ಯೆಯಾದಾಗ ಕಠಿಣ ಕ್ರಮ ತೆಗೆದುಕೊಂಡಿತು.‌ ಕುಕ್ಕರ್‌ ಬಾಂಬ್ ಬ್ಲಾಸ್ಟ್ ನಡೆದಾಗ ಎನ್ಐಗೆ ವಹಿಸಲಾಗಿತ್ತು. ಆದರೆ ಕಾಂಗ್ರೆಸ್‌ ಡಿಜೆ ಹಳ್ಳಿ, ಕೆಜಿ ಹಳ್ಳಿ, ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ಹಿಂಪಡೆಯಲು ಮುಂದಾಗಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಕೆ.ಎಫ್.ಡಿ. ಹಾಗೂ ಎಸ್.ಡಿ.ಪಿ.ಐ.ಗೆ ಕಾಂಗ್ರೆಸ್ ಬೆಂಬಲ ಇದೆ. ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ಯಾರ ಪಾತ್ರವಿತ್ತು? ಜಮೀರ್ ಸಿದ್ದರಾಮಯ್ಯ ಶಿಷ್ಯ, ಡಿ.ಕೆ.ಶಿವಕುಮಾರ್ ಯಾರ ಶಿಷ್ಯ ಎಂಬುದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲಿಗೆ ಟಿಪ್ಪು, ಎರಡನೇ ಅಧ್ಯಾಯ ಔರಂಗಜೇಬ್. ಇದರ ಹಿಂದೆ ಆತಂಕವಾದಿಗಳಿರುವ ಶಂಕೆ ಇದೆ. ಇವರಿಗೆ ಸಿದ್ದರಾಮಯ್ಯರ ಸರ್ಕಾರ ಬೆಂಬಲವಿದೆ. ರಾಗಿಗುಡ್ಡದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಬೇಕು. ಪುರುಷರಿಗಿಂತ ಮಹಿಳೆಯರ ಮೇಲೆ ಹಲ್ಲೆಯಾಗಿದೆ. ಸರ್ಕಾರ ಹಿಂದೂ ವಿರೋಧಿ ಮಾತ್ರವಲ್ಲ ಮಹಿಳಾ ವಿರೋಧಿಯೂ ಆಗಿದೆ. ಪ್ರಕರಣ ಮುಚ್ಚುಹಾಕಲು‌ ಕಾಂಗ್ರೆಸ್ ಯತ್ನಿಸಿದೆ ಎಂದು ಆರೋಪಿಸಿದರು.





























































































































error: Content is protected !!
Scroll to Top