ಸ್ವಾಗತ ಕಮಾನಿನಲ್ಲಿ 200 ಕೆ.ಜಿ ತೂಕದ ಕತ್ತಿಯ ಆಕಾರ
ಕೋಲಾರ: ಈದ್ ಮಿಲಾದ್ ಮೆರವಣಿಗೆಯಲ್ಲಿ ಕುದುರೆಯೇರಿ ಖಡ್ಗ ಜಳಪಿಸಿ ಭೀತಿಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಎರಡು ಪ್ರಕರಣ ದಾಖಲಿಸಿಕೊಂಡಿರುವ ಇಲ್ಲಿನ ಪೊಲೀಸರು ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ. ಗುರುವಾರ ನಡೆದ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಕೋಲಾರ ನಗರದಲ್ಲಿ ಈ ಘಟನೆ ಸಂಭವಿಸಿದೆ. ಕೋಲಾರ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ಆರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹಬ್ಬದ ಪ್ರಯುಕ್ತ ಸ್ವಾಗತ ಕಮಾನಿನಲ್ಲಿ ಬೃಹತ್ ಕತ್ತಿ ಅಳವಡಿಸಿದ್ದಲ್ಲದೆ ಓರ್ವ ಕುದುರಯೇರಿ ಖಡ್ಗ ಜಳಪಿಸಿ ಹೆದರಿಕೆ ಹುಟ್ಟಿಸಿದ್ದ. ಈ ಸಂಬಂಧ ಸಗೀರ್, ಅಸ್ಲಾಂ ಪಾಷಾ, ಚಾಂದ್ ಪಾಷಾ, ಮನ್ಸೂರ್ ಆಲಿ, ಮೊಹಮದ್ ಬಿಲಾಲ್, ಸಾಧಿಕ್ ಪಾಷಾ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.
ಸಂಸದ ಮುನಿಸ್ವಾಮಿ ಹಬ್ಬದ ವೇಳೆ ಕತ್ತಿ ಜಳಪಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಪೊಲೀಸರು ಜೆಸಿಬಿ ತಂದು 200 ಕೆಜಿ ತೂಕದ ಕತ್ತಿಯ ಸ್ವಾಗತ ಕಮಾನನ್ನು ತೆರವುಗೊಳಿಸಿದ್ದರು. ಕೋಲಾರದ ಕ್ಲಾಕ್ ಟವರ್ ಬಳಿ ದೇವರ ಆಶೀರ್ವಚನ ಪದಗಳನ್ನು ಬರೆಯಲಾಗಿದ್ದ ಬೃಹತ್ ಕತ್ತಿಯ ಆಕೃತಿಯನ್ನು ಅಳವಡಿಸಲಾಗಿತ್ತು. ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಕತ್ತಿ ತೆರವುಗೊಳಿಸದಿದ್ದರೆ ನಾವು ಗಣೇಶ ಹಬ್ಬಕ್ಕೆ ತ್ರಿಶೂಲ ಹಾಕ್ತೀವಿ ಎಂದಿದ್ದರು. ಸಂಸದರ ವಿರೋಧದ ಬೆನ್ನಲ್ಲೇ ಪೊಲೀಸರು ವಿವಾದಕ್ಕೆ ಕಾರಣವಾಗಿದ್ದ ಕತ್ತಿಯ ಅಕೃತಿಗಳನ್ನು ತೆರವುಗೊಳಿಸಿದ್ದರು.
























