ತಮಿಳುನಾಡಿಗೆ ನೀರು ಬಿಡದಿದ್ದರೆ ಸರಕಾರ ವಜಾಗೊಳ್ಳುವ ಭೀತಿ : ಸಿದ್ದರಾಮಯ್ಯ

ಸುಪ್ರೀ ಕೋರ್ಟ್‌ ಆದೇಶ ಪಾಲಿಸಲೇ ಬೇಕಾಗುತ್ತದೆ ಎಂದ ಸಿಎಂ

ಬೆಂಗಳೂರು: ತಮಿಳುನಾಡಿಗೆ ನೀರು ಬಿಡಬಾರದು ಎಂಬ ರೈತರ ಅಭಿಪ್ರಾಯವನ್ನು ರಾಜ್ಯ ಸರ್ಕಾರ ಒಪ್ಪುತ್ತದೆ, ಆದರೆ ಅದು ನ್ಯಾಯಾಂಗ ನಿಂದನೆ ಪ್ರಕರಣವಾಗಿ ಸರ್ಕಾರವನ್ನು ವಜಾಗೊಳಿಸುವುದಕ್ಕೆ ಕಾರಣವಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಜಲಸಂರಕ್ಷಣಾ ಸಮಿತಿ, ರೈತ ಸಂಘಗಳು ಸೇರಿದಂತೆ ಸಂಘಟನೆಗಳ ಸದಸ್ಯರಿಗೆ ಸರ್ಕಾರದ ಸ್ಥಿತಿಯ ಬಗ್ಗೆ ವಿವರಿಸಿದ ಸಿಎಂ ಸಿದ್ದರಾಮಯ್ಯ, ತಮಿಳುನಾಡಿಗೆ ನೀರು ಬಿಡದಿದ್ದರೆ ರಾಜ್ಯದ ಜಲಾಶಯಗಳ ಮೇಲೆ ಕೇಂದ್ರ ಸರಕಾರ ನಿಯಂತ್ರಣ ಸಾಧಿಸಬಹುದು ಎಂದು ವಿವರಿಸಿದ್ದಾರೆ.
ಆಗಸ್ಟ್‌ನಲ್ಲಿ ಮಳೆ ಕೊರತೆಯಾಗಿ ಈ ಸಮಸ್ಯೆ ಉದ್ಭವಿಸಿದೆ. ಈ ತಿಂಗಳೂ ರಾಜ್ಯದಲ್ಲಿ ಇದುವರೆಗೆ ಕಡಿಮೆ ಮಳೆಯಾಗಿದೆ. ನಾವು ಈ ವಿಷಯವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ಸಭೆಗಳಲ್ಲಿ ಪ್ರಸ್ತಾಪಿಸಿದ್ದೇವೆ. ಕಾವೇರಿ ಜಲಾನಯನ ಪ್ರದೇಶದ ನಮ್ಮ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರಿಲ್ಲ. ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದೇವೆ ಎಂದು ಸಿಎಂ ಹೇಳಿದರು.
ಅಕ್ಟೋಬರ್ 15 ರವರೆಗೆ ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯಕ್ಕೆ ಸಿಡಬ್ಲ್ಯೂಎಂಎ ನಿರ್ದೇಶನದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲು ರೈತರ ನಿಯೋಗವು ಕಾನೂನು ತಜ್ಞರೊಂದಿಗಿನ ಸಭೆಯ ಮೊದಲು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು. ಕೂಡಲೇ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಸಮಿತಿ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.
ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಕರೆಯಬೇಕು ಮತ್ತು ಸಂಕಷ್ಟ ಸೂತ್ರದ ಕುರಿತು ಎಲ್ಲಾ ಪಾಲುದಾರರು ಒಮ್ಮತಕ್ಕೆ ಬರುವವರೆಗೆ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೇಂದ್ರಕ್ಕೆ ಕಳುಹಿಸಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.

















































error: Content is protected !!
Scroll to Top