ಸಂಪಾದಕೀಯ-ಕಾನೂನು v/s ಮಾನವೀಯತೆಯ ನಡುವಿನ ಸಂಘರ್ಷ

ಮುಷ್ಕರದಿಂದ ಅತಂತ್ರರಾಗಿದ್ದಾರೆ ಸಾವಿರಾರು ಕಾರ್ಮಿಕರು

ಕಾರ್ಕಳ : ಮರಳು, ಕೆಂಪುಕಲ್ಲು, ಜಲ್ಲಿಕಲ್ಲು ಮತ್ತಿತರ ಕಟ್ಟಡ ಸಾಮಗ್ರಿಗಳನ್ನು ಸಾಗಿಸುವ ಲಾರಿಗಳನ್ನು ತಡೆದು ಪೊಲೀಸರು ಕೇಸು ದಾಖಲಿಸಿಕೊಳ್ಳುತ್ತಿರುವ ಕ್ರಮವನ್ನು ಖಂಡಿಸಿ ಲಾರಿ ಟೆಂಪೊ ಮಾಲೀಕರು ಮತ್ತು ಚಾಲಕರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಉಡುಪಿಗೆ ಡಾ.ಅರುಣ್‌ ಎಸ್‌ಪಿಯಾಗಿ ಬಂದ ಬಳಿಕ ಅಕ್ರಮ ಗಣಿಗಾರಿಕೆ ವಿರುದ್ಧ ಪೊಲೀಸರು ಮುಗಿಬಿದ್ದ ಪರಿಣಾಮವಾಗಿ ಸಮಸ್ಯೆ ಉಂಟಾಗಿದೆ.
ಕಾನೂನುಬದ್ಧವಾಗಿ ಮಾಡುವ ಗಣಿಗಾರಿಕೆಗೆ ಅಡ್ಡಿಯಿಲ್ಲ. ಆದರೆ ಅಕ್ರಮವಾಗಿ ಯಾವುದೇ ಚಟುವಟಿಕೆ ನಡೆಸಲು ಬಿಡುವುದಿಲ್ಲ ಎನ್ನುವುದು ಪೊಲೀಸರ ವಾದ. ಆದರೆ ಲಾಗಾಯ್ತಿನಿಂದ ಕರಾವಳಿ ಭಾಗದಲ್ಲಿ ಇದೇ ವ್ಯವಸ್ಥೆ ನಡೆಯುತ್ತಿದೆ. ಇಷ್ಟರ ತನಕ ಇಲ್ಲದ ಸಮಸ್ಯೆ ಈಗ ಉಂಟಾಗಿರುವುದು ಏಕೆ? ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲದ ಕಾನೂನು ಉಡುಪಿ ಜಿಲ್ಲೆಯಲ್ಲಿ ಮಾತ್ರ ಯಾಕೆ ಜಾರಿಗೆ ಬಂದಿದೆ ಎಂದು ಲಾರಿ ಮತ್ತು ಕ್ರಷರ್‌ ಮಾಲಕರು ಕೇಳುವ ಪ್ರಶ್ನೆ.
ಕಳೆದ ಸುಮಾರು ಹತ್ತು ದಿನಗಳಿಂದ ಲಾರಿ ಮಾಲಕ-ಚಾಲಕರು ಹೋರಾಟ ನಡೆಸುತ್ತಿರುವುದರಿಂದ ಕಟ್ಟಡ ನಿರ್ಮಾಣ ಉದ್ಯಮ ಪೂರ್ತಿಯಾಗಿ ಸ್ಥಗಿತಗೊಂಡಿರುವುದು ನಿಜ. ಇದರಿಂದ ಅನೇಕರ ಬದುಕು ಅತಂತ್ರಗೊಂಡಿದೆ. ಜಿಲ್ಲೆಯ ಸದ್ಯದ ಪರಿಸ್ಥಿತಿ ಕಾನೂನು v/s ಮಾನವೀಯತೆಯ ನಡುವಿನ ಸಂಘರ್ಷವಾಗಿ ಬದಲಾಗಿದೆ.
ಮುಷ್ಕರದಿಂದಾಗಿ ಕಟ್ಟಡ ನಿರ್ಮಾಣ ಉದ್ಯಮ ಸ್ಥಗಿತಗೊಂಡಿರುವುದರಿಂದ ಲಾರಿ ಮತ್ತು ಕ್ರಷರ್‌ ಮಾಲಕರಿಗೆ ಮಾತ್ರ ನಷ್ಟವಾಗುತ್ತಿರುವುದಲ್ಲ. ಈ ಉದ್ಯಮವನ್ನು ನಂಬಿಕೊಂಡಿರುವ ಸಾವಿರಾರು ಮಂದಿಯ ಬದುಕು ಅತಂತ್ರಗೊಂಡಿದೆ. ಕಟ್ಟಡ ನಿರ್ಮಾಣ ಕಾರ್ಮಿಕರು, ಗಣಿಗಳಲ್ಲಿ ದುಡಿಯುವ ಕಾರ್ಮಿಕರು, ಲಾರಿ, ಟೆಂಪೊ ಚಾಲಕರ ದಿನದ ತುತ್ತಿನ ಗಳಿಕೆಗೆ ತತ್ವಾರ ಉಂಟಾಗಿದೆ. ಇಷ್ಟು ಮಾತ್ರವಲ್ಲ ಈ ಉದ್ಯಮವನ್ನು ಆಶ್ರಯಿಸಿಕೊಂಡಿರುವ ಇನ್ನಿತರ ಅನೇಕ ಉದ್ಯಮಗಳು ನಷ್ಟ ಅನುಭವಿಸುತ್ತಿವೆ. ಹಾರ್ಡ್‌ವೇರ್‌ ಅಂಗಡಿಗಳು, ಹೋಟೆಲ್‌ ಮತ್ತಿತರ ಉದ್ಯಮಗಳಿಗೂ ಮುಷ್ಕರ ಹೊಡೆತ ನೀಡಿದೆ.

ಒಂದು ಅಂದಾಜಿನ ಪ್ರಕಾರ ಉಡುಪಿ ಜಿಲ್ಲೆಯೊಂದರಲ್ಲೇ ಸುಮಾರು 30 ಸಾವಿರ ಕುಟುಂಬಗಳು ಕಟ್ಟಡ ನಿರ್ಮಾಣ ಉದ್ಯಮವನ್ನು ನೇರವಾಗಿ ಅವಲಂಬಿಸಿ ಜೀವನ ನಡೆಸುತ್ತಿವೆ. ಇದರಲ್ಲಿ ಹೊರಜಿಲ್ಲೆಯ ಕಾರ್ಮಿಕರೂ ಇದ್ದಾರೆ. ಕಳೆದ 10-15 ದಿನಗಳಿಂದ ಇವರೆಲ್ಲ ನಯಾಪೈಸೆ ದುಡಿಮೆಯಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಲಾರಿ, ಟೆಂಪೊ ಮಾಲಕರು ವಾಹನಗಳ ತೆರಿಗೆ ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಈ ಹೋರಾಟ ಪಕ್ಷಾತೀತವಾಗಿ, ಜಾತಿ ಧರ್ಮದ ಹಂಗಿಲ್ಲದೆ ನಡೆಯುತ್ತಿರುವುದು ಹಸಿವಿನ ಎದುರು ಎಲ್ಲವೂ ನಗಣ್ಯ ಎಂಬುದನ್ನು ಸಾಬೀತುಪಡಿಸಿದೆ.

ವಾಸ್ತವ ವಿಚಾರವನ್ನು ಅವಲೋಕಿಸುವಾಗ ಎರಡೂ ಕಡೆಯವರ ವಾದ ಸರಿ ಎಂದು ಅನ್ನಿಸುತ್ತದೆ. ಅಕ್ರಮಗಳನ್ನು ತಡೆಯಬೇಕಾದದ್ದು ಪೊಲೀಸರ ಕರ್ತವ್ಯ. ಅವರು ಅವರ ಕೆಲಸವನ್ನು ಮಾಡುತ್ತಿದ್ದಾರೆ. ಸಕ್ರಮವಾಗಿ ವ್ಯವಹಾರ ಮಾಡಿ, ಸರಕಾರದ ನಿಯಮಗಳನ್ನು ಪಾಲಿಸಿ ಎನ್ನುವ ಅವರ ವಾದದಲ್ಲಿ ತಪ್ಪು ಕಂಡು ಹುಡುಕಲು ಸಾಧ್ಯವಿಲ್ಲ. ಆದರೆ ಏಕಾಏಕಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಆಗಬಹುದಾದ ಪರಿಣಾಮಗಳನ್ನು ಅವರು ಪರಿಗಣಿಸಬೇಕಿತ್ತು. ಲಾಗಾಯ್ತಿನಿಂದ ನಡೆದುಕೊಂಡು ಬಂದಿದೆ ಹೀಗಾಗಿ ಅದನ್ನೇ ಮುಂದುವರಿಸುತ್ತೇವೆ ಎನ್ನುವ ಬದಲು ಇದಕ್ಕೊಂದು ಪರಿಹಾರ ಕಂಡುಕೊಳ್ಳುವುದು ಸದ್ಯಕ್ಕೆ ಉಳಿದಿರುವ ಮಾರ್ಗ. ಕಾನೂನು ಭಂಗವಾಗದಂತೆ ವ್ಯವಹಾರ ನಡೆಸುವುದು ನಾಗರಿಕರ ಕರ್ತವ್ಯ. ಅಂತೆಯೇ ಇದಕ್ಕೆ ಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿಕೊಡುವುದು ಸರಕಾರದ ಜವಾಬ್ದಾರಿ. ಎಲ್ಲರೂ ಹೊಣೆಯರಿತು ತಮ್ಮ ಜವಾಬ್ದಾರಿ ನಿಭಾಯಿಸಿದರೆ ಈ ಸಮಸ್ಯೆಗೊಂದು ಪರಿಹಾರ ಸಿಗಬಹುದು.







































































































error: Content is protected !!
Scroll to Top