ರಾತ್ರಿಯಿಂದೀಚೆಗೆ ಅಬ್ಬರಿಸುತ್ತಿರುವ ವರುಣ
ಕಾರ್ಕಳ : ಈ ವರ್ಷ ಮಳೆ ಕೊರತೆ ಎಂಬ ಚಿಂತೆ ಕಾಡುತ್ತಿರುವಾಗಲೇ ಬಹಳ ದಿನಗಳ ಬಿಡುವಿನ ಬಳಿಕ ಕರಾವಳಿಯಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ನಿನ್ನೆ ರಾತ್ರಿಯಿಂದೀಚೆಗೆ ಕರಾವಳಿಯುದ್ದಕ್ಕೂ ಭಾರಿ ಮಳೆಯಾಗುತ್ತಿದ್ದು, ಜನರ ಮೊಗದಲ್ಲಿ ಸಂತಸ ಮೂಡಿದೆ.
ಮಳೆಗಾಲದ ಆರಂಭದಿಂದಲೇ ಮಳೆ ಕಣ್ಣಾಮುಚ್ಚಾಲೆಯಾಡುತ್ತಿದ್ದು, ಜೂನ್ ಅಂತ್ಯಕ್ಕೆ ಸುರುವಾಗಿ ಜುಲೈಯಲ್ಲಿ ಅಬ್ಬರಿಸಿ ಬಳಿಕ ಕಾಣೆಯಾಗಿತ್ತು. ಆಗಸ್ಟ್ ಇಡೀ ತಿಂಗಳು ಮಳೆ ಕೊರತೆಯಾಗಿ ರಾಜ್ಯದಲ್ಲಿ ಬರದ ಸ್ಥಿತಿ ಉಂಟಾಗಿದೆ. ಸೆಪ್ಟೆಂಬರ್ ದ್ವಿತೀಯಾರ್ಧದ ಬಳಿಕ ಕರಾವಳಿಯಲ್ಲಿ ಮಳೆ ಚುರುಕುಗೊಂಡಿದೆ. ದಿನಕ್ಕೊಂದೆರಡಂತೆ ಸುರಿದು ತಂಪೆರೆಯುತ್ತಿದ್ದ ಮಳೆ ನಿನ್ನೆಯಿಂದೀಚೆಗೆ ಅಬ್ಬರಿಸತೊಡಗಿದ್ದು, ಹಳ್ಳಕೊಳ್ಳಗಳು ತುಂಬಿ ಅಣೆಕಟ್ಟೆಗಳು ಭರ್ತಿಯಾಗಿವೆ.
ಕಾರ್ಕಳ ನಗರ ಭಾಗದಲ್ಲಿ 24.8 ಮಿ. ಮೀ., ಇರ್ವತ್ತೂರಿನಲ್ಲಿ 17.6 ಮಿ. ಮೀ., ಅಜೆಕಾರು 34.0 ಮಿ. ಮೀ., ಸಾಣೂರು 17.8 ಮಿ. ಮೀ., ಕೆದಿಂಜೆ 21.2 ಮಿ. ಮೀ., ಮುಳಿಕಾರು 38.0 ಮಿ. ಮೀ. ಹಾಗೂ ಕೆರ್ವಾಶೆಯಲ್ಲಿ 44. 8 ಮಿ. ಮೀ. ಮಳೆಯಾಗಿದೆ.