ಕೇಂದ್ರ ರೈಲ್ವೇ ಸಚಿವರಿಗೆ ಪತ್ರದ ಮೂಲಕ ಒತ್ತಾಯ
ಕಾರ್ಕಳ : ಮಂಗಳೂರು-ಮುಂಬಯಿ ನಡುವೆ ʼವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಸಂಚಾರ ಪ್ರಾರಂಭಿಸಲು ಶಾಸಕ ಸುನಿಲ್ ಕುಮಾರ್ ರೈಲ್ವೇ ಸಚಿವಾಲಯನ್ನು ಒತ್ತಾಯಿಸಿದ್ದಾರೆ. ಈ ಕುರಿತು ಕೇಂದ್ರ ರೈಲ್ವೇ ಸಚಿವರಿಗೆ ಬರೆದ ಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನ ಮತ್ತು ಮುಂದಾಲೋಚನೆಯಿಂದಾಗಿ ʻವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲು ಭಾರತದ ರೈಲು ಮಾರ್ಗಗಳ ಅಭಿವೃದ್ಧಿಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಪ್ರಯಾಣಿಕರು ಈ ರೈಲಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಪ್ರಸ್ತುತ ಕರ್ನಾಟಕದಲ್ಲಿ ಮೂರು ʻವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಇದರೊಂದಿಗೆ ಹೆಚ್ಚುವರಿಯಾಗಿ ಅತಿ ಅಗತ್ಯವಾಗಿರುವ ಮಂಗಳೂರು-ಮುಂಬಯಿ ನಡುವೆ ʼವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಸಂಚಾರ ಪ್ರಾರಂಭಿಸಲಬೇಕೆಂದು ಸಂಸದರ ಮುಖೇನ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಕರಾವಳಿ ಕರ್ನಾಟಕದ ಜನತೆ ಮತ್ತು ಮುಂಬಯಿ ನಡುವಿನ ನಂಟು ವ್ಯಾಪಾರ, ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿರದೆ ವಿವಿಧ ಆಯಾಮಗಳನ್ನು ಹೊಂದಿದೆ. ಕರಾವಳಿಯ ಜನರು ಶತಮಾನಗಳಿಂದ ಮುಂಬಯಿಯೊಂದಿಗೆ ನಿಕಟವಾದ ಸಂಪರ್ಕ ಹೊಂದಿದ್ದಾರೆ. ಪ್ರತಿನಿತ್ಯ ನೂರಾರು ಜನರು ಮುಂಬಯಿ-ಮಂಗಳೂರು ನಡುವೆ ಸಂಚರಿಸುತ್ತಿದ್ದು, ʻವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸುವುದರಿಂದ ಪ್ರಯಾಣದ ಅವಧಿ ಹಾಗೂ ಆರ್ಥಿಕ ಹಿತದೃಷ್ಟಿಯಿಂದ ಜನರಿಕರಿಗೆ ಅನುಕೂಲವಾಗುತ್ತದೆ.
ಈ ನಿಟ್ಟಿನಲ್ಲಿ ಮಂಗಳೂರು ಮತ್ತು ಮುಂಬಯಿ ನಡುವೆ ಹೊಸ ʻವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲು ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಶಾಸಕರಾದ ವಿ.ಸುನಿಲ್ ಕುಮಾರ್ ಅವರು ಮನವಿ ಮಾಡಿದ್ದಾರೆ.