ಅರ್ಕೆಸ್ಟ್ರಾದಲ್ಲಿ ಹಾಡುವ ಅವಕಾಶ ನೀಡುವುದಾಗಿ ನಂಬಿಸಿ ಸ್ನೇಹ ಗಳಿಸಿದ್ದ ಆರೋಪಿ
ಪುತ್ತೂರು : ಹಾಡುವ ಆಸಕ್ತಿಯಿದ್ದ ವಿವಾಹಿ ಮಹಿಳೆಯನ್ನು ಕ್ಲಬ್‌ಹೌಸ್‌ನಲ್ಲಿ ಪರಿಚಯಿಸಿಕೊಂಡು ಅರ್ಕೆಸ್ಟ್ರಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು, ಅಸಭ್ಯ ಚಿತ್ರ ಸೆರೆಹಿಡಿದು ಲಕ್ಷಾಂತರ ರೂ. ಹಣ ನೀಡುವಂತೆ ಬ್ಯ್ಲಾಕ್‌ಮೇಲ್ ಮಾಡಿದ ಪುತ್ತೂರಿನ ಯುವಕನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ದ.ಕ. ಜಿಲ್ಲೆಯ ಸುಬ್ರಮಣ್ಯ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ, ಪುತ್ತೂರಿನ ಆರ್ಲಪದವು ಮೂಲದ ನಿವಾಸಿ ಪ್ರಶಾಂತ ಭಟ್ ಮಾಣಿಲ (35) ಎಂದು ಗುರುತಿಸಲಾಗಿದೆ.
ಮಹಿಳೆಗೆ ಸಂಗೀತದಲ್ಲಿ ಆಸಕ್ತಿ ಇದ್ದು ಕ್ಲಬ್ ಹೌಸ್ ಆ್ಯಪ್‌ನಲ್ಲಿ ಹೆಚ್ಚಾಗಿ ಹಾಡು ಕೇಳುತ್ತಿದ್ದರು. ಮೂರು ವರ್ಷದ ಹಿಂದೆ ಆರೋಪಿಯ ಪರಿಚಯವಾಗಿತ್ತು. ನಂತರ ಅವರು ಚಾಟಿಂಗ್ ಮಾಡುತ್ತಿದ್ದರು. ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಹೇಳಿ ಆಸೆ ಹುಟ್ಟಿಸಿದ್ದ.
ಕಳೆದ ಜನವರಿಯಲ್ಲಿ ಆರೋಪಿ ಮಹಿಳೆಯನ್ನು ಶಿರಸಿ ದೇವಾಲಯದಲ್ಲಿ ಭೇಟಿಯಾಗಿ ಅಲ್ಲಿಂದ ಲಾಡ್ಜ್‌ಗೆಕರೆದುಕೊಂಡು ಹೀಗಿದ್ದ. ಮಹಿಳೆಯೊಂದಿಗಿರುವ ಖಾಸಗಿ ಕ್ಷಣಗಳ ಫೋಟೊ ಕ್ಲಿಕ್ಕಿಸಿಕೊಂಡು ಜತೆಗೆ ವಿಡಿಯೋ ಕಾಲ್ ಮಾಡಿ ಅಲ್ಲಿಯೂ ನಗ್ನ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ಇದಾದ ಬಳಿಕ ಆರೋಪಿ ಮಹಿಳೆಯ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಮಹಿಳೆ ಬೆದರಿಕೆ ಹೆದರಿ 25 ಸಾವಿರ ರೂ. ನೀಡಿದ್ದಾರೆ. ನಂತರ ಆರೋಪಿ ಸಂತ್ರಸ್ತ ಮಹಿಳೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಒಡ್ಡಿ ಏಳು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಮಹಿಳೆಯ ತಾಯಿ ಮತ್ತು ಸ್ನೇಹಿತರಿಗೂ ಚಿತ್ರಗಳನ್ನು ಕಳುಹಿಸಿದ್ದು, ಮತ್ತೆ ಹಣಕ್ಕಾಗಿ ಬ್ಯ್ಲಾಕ್‌ಮೇಲ್ ಮಾಡುತ್ತಿದ್ದ. ಅವನ ಕಿರುಕುಳ ಸಹಿಸಲಾಗದೆ ಮಹಿಳೆ ನೀಡಿದ ದೂರಿನಂತೆ ಕಾರವಾರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.