ತಾಲೂಕು ಕಚೇರಿಯಲ್ಲಿ ಲ್ಯಾಂಡ್‌ ರಿಜಿಸ್ಟ್ರೇಷನ್‌ಗೆ ರಶ್ಶೋ ರಶ್ಶು

ಅ. 1ರಿಂದ ಶುಲ್ಕ ಏರಿಕೆಯಾಗುವ ಕಾರಣ ನೋಂದಣಿಗೆ ಧಾವಂತ

ಕಾರ್ಕಳ : ರಾಜ್ಯದಲ್ಲಿ ಅಕ್ಟೋಬರ್ 1ರಿಂದ ಭೂಮಿಯ ನೋಂದಣಿ ಶುಲ್ಕ ಶೇ.30 ಹೆಚ್ಚಾಗಲಿರುವುದರಿಂದ ಮಾಸಾಂತ್ಯ ದಿನವಾದ ಶುಕ್ರವಾರ ಕಾರ್ಕಳದ ತಾಲೂಕು ಕಚೇರಿಯಲ್ಲಿರುವ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಬಹಳ ಜನಸಂದಣಿ ಕಂಡುಬಂತು. ಈ ತಿಂಗಳೊಳಗೆ ನೋಂದಣಿ ಪ್ರಕ್ರಿಯೆ ಮುಗಿಸಿ ಹಣ ಉಳಿಸುವ ಧಾವಂತದಲ್ಲಿ ಜನರು ಧಾವಿಸಿ ಬಂದ ಪರಿಣಾಮ ಜನಜಂಗುಳಿ ಉಂಟಾಗಿತ್ತು.

ಅ.1ರಿಂದ ಪರಿಷ್ಕೃತ ನೂತನ ಮಾರ್ಗಸೂಚಿ ದರ (ಗೈಡೆನ್ಸ್ ವ್ಯಾಲ್ಯೂ) ಜಾರಿಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಘೋಷಿಸಿದ್ದಾರೆ. ರಾಜ್ಯದಲ್ಲಿ ಭೂಮಿ, ನಿವೇಶನ, ಕಟ್ಟಡ ಸೇರಿ ಸ್ಥಿರಾಸ್ತಿಗಳ ಮೌಲ್ಯವೂ ಇದರಿಂದ ದುಬಾರಿಯಾಗಲಿದೆ. ನಾಲ್ಕು ವರ್ಷಗಳ ಬಳಿಕ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಯಾಗುತ್ತಿದೆ. ಮಾರುಕಟ್ಟೆ ಮೌಲ್ಯ ಹಾಗೂ ಮಾರ್ಗಸೂಚಿ ದರ ನಡುವೆ ಹೆಚ್ಚಿರುವ ಅಂತರ ತಗ್ಗಿಸಲು ಆಸ್ತಿಗಳ ಮೌಲ್ಯ ಪರಿಷ್ಕರಣೆ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ. ಸ್ಥಿರಾಸ್ತಿ ಮೌಲ್ಯವನ್ನು ಸರಾಸರಿ ಶೇ.30ರಷ್ಟು ಹೆಚ್ಚಳ ಮಾಡಲಾಗುತ್ತಿದೆ.

ತಾಲೂಕು ಕಚೇರಿಯಲ್ಲಿ ಜಮಾಯಿಸಿದ ಜನ
ಹೆಚ್ಚಾಗಲಿರುವ ಮುದ್ರಣ ಶುಲ್ಕ ಮತ್ತು ನೋಂದಣಿ ವೆಚ್ಚವನ್ನು ಉಳಿಸಲು ಭೂಮಿ ವಿಕ್ರಯಿಸಿದವರು ಆಸ್ತಿ ನೋಂದಣಿ ಮಾಡಿಕೊಳ್ಳಲು ಕಾರ್ಕಳ ತಾಲೂಕು ಕಚೇರಿಯಲ್ಲಿರುವ ಸಬ್‌ ರಿಜಿಸ್ಟ್ರೇಷನ್‌ ಆಫೀಸ್‌ ಮುಂದೆ ಜಮಾಯಿಸಿದ್ದಾರೆ. ಈ ವಾರದಲ್ಲಿ ದಿನಕ್ಕೆ ಸುಮಾರು 60 ರವರೆಗೆ ನೋಂದಾವಣಿ ನಡೆಯುತ್ತಿದ್ದು, ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಧಾವಿಸಿದ್ದು, ರಾತ್ರಿ 8 ಗಂಟೆಯವರೆಗೆ ನೋಂದಾವಣೆ ಪ್ರಕ್ರಿಯೆ ನಡೆಯಲಿದೆ. ರಿಜಿಸ್ಟ್ರಾರ್‌ ಕಚೇರಿ ಸಿಬ್ಬಂದಿ ನಿರಂತರ ಕೆಲಸದ ಒತ್ತಡದಿಂದ ಬಸವಳಿಯುತ್ತಿದ್ದಾರೆ.

ಸಬ್‌ ರಿಜಿಸ್ಟ್ರೇಷನ್‌ ಆಫೀಸ್‌ ಮುಂದೆ ಜಮಾಯಿಸಿದ ಜನ

ಗ್ಯಾರಂಟಿಗೆ ಹಣ ಹೊಂದಿಸಲು ಏರಿಕೆ
ಕಾಂಗ್ರೆಸ್‌ ಸರಕಾರ ತಾನು ನೀಡಿರುವ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಆಸ್ತಿ ನೋಂದಣಿ ಶುಲ್ಕವನ್ನು ಸಿಕ್ಕಾಪಟ್ಟೆ ಏರಿಸುತ್ತಿದೆ. ಒಂದೆಡೆ ಜನರು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಈ ನಡುವೆ ನೋಂದಣಿ ಶುಲ್ಕ ಹೆಚ್ಚಿಸುವ ನಿರ್ಧಾರ ಜನರನ್ನು ಆರ್ಥಿಕವಾಗಿ ಇನ್ನಷ್ಟು ಕುಂಠಿತಗೊಳಿಸುತ್ತಿದೆ ಎಂದು ರಿಜಿಸ್ಟ್ರೇಷನ್‌ಗೆ ಸೇರಿರುವ ಕೆಲ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಬ್‌ ರಿಜಿಸ್ಟ್ರೇಷನ್‌ ಆಫೀಸ್‌ನಲ್ಲಿ ಶಾಸಕ ಭರತ್‌ ಶೆಟ್ಟಿ

ಶಾಸಕರೂ ಸರದಿಯಲ್ಲಿ ನಿಂತರು
ಮಂಗಳೂರು ಉತ್ತರ ಶಾಸಕ ಭರತ್‌ ಶೆಟ್ಟಿಯವರು ಹಿಂದಿನ ಜಾಗದ ನೋಂದಣಿಗಾಗಿ ಕುಟುಂಬ ಸಮೇತ ಸಬ್‌ರಿಜಿಸ್ಟ್ರೇಶನ್‌ ಕಚೇರಿಗೆ ಬಂದಿದ್ದರು. ರಿಜಿಸ್ಟ್ರೇಷನ್‌ ಆಫೀಸಿನಲ್ಲಿ ಆಸ್ತಿ ನೋಂದಾವಣಿದಾರರೇ ಜಮಾಯಿಸಿದ್ದ ಕಾರಣ ಅವರು ಕೂಡ ಜನಸಾಮಾನ್ಯರ ಜತೆ ಸರದಿಗಾಗಿ ಕಾದು ನಿಲ್ಲಬೇಕಾಯಿತು.

ವರದಿ : ನಳಿನಿ ಸುವರ್ಣ ಮುಂಡ್ಲಿerror: Content is protected !!
Scroll to Top