ಸಂಪಾದಕೀಯ

ಕಾರ್ಕಳದಲ್ಲಿ ನಿಲ್ಲದ ರಾಜಕೀಯ ಕೆಸರೆರಚಾಟಅಭಿವೃದ್ಧಿಯತ್ತ ಚಿತ್ತ ಹರಿಸಲಿ ರಾಜಕೀಯ ಪಕ್ಷ

ಕರಾವಳಿಯ ಕೊನೆಯಂತಿರುವ, ಮಲೆನಾಡಿನ ಮೊನೆಯಂತಿರುವ ಕಾರ್ಕಳ ಬಹುಷಃ ರಾಜ್ಯದಲ್ಲೇ ಅತ್ಯಂತ ಸುರಕ್ಷಿತ, ಸಾಮರಸ್ಯದ ನಾಡು. ಶಿಲ್ಪಕಲೆ, ಸಾಹಿತ್ಯ, ಭೌಗೋಳಿಕವಾಗಿಯೂ ಸಮೃದ್ಧವಾಗಿರುವ ನೆಲ. ಉದ್ಯಮ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದಿರುವ ಕಾರ್ಕಳ ರಾಜಕೀಯ ಕ್ಷೇತ್ರದಲ್ಲೂ ರಾಜ್ಯ, ರಾಷ್ಟ್ರಮಟ್ಟದ ನಾಯಕರನ್ನು ಬೆಳೆಸಿದ ಊರು. ಚುನಾವಣೆ ಸಂದರ್ಭ ರಾಜಕೀಯ ಬೆಳವಣಿಗೆಗಳು ಗರಿಗೆದರಿದರೂ ಅನಂತರ ಮೌನವಾಗುವುದು ಇಲ್ಲಿನ ಸಂಪ್ರದಾಯ. ಚುನಾವಣೆ ಅನಂತರ ರಾಜಕೀಯ ದ್ವೇಷ, ಆರೋಪ – ಪ್ರತ್ಯಾರೋಪ ಅನ್ನುವುದು ಇಲ್ಲಿ ಬಹಳ ವಿರಳ. ಪುರಸಭೆ, ತಾಲೂಕು ಪಂಚಾಯತ್‌ ಸಭೆಗಳಲ್ಲೂ ಕಲಾಪ ಹೊರತು ಪಡಿಸಿ ಎಲ್ಲ ಪಕ್ಷದ ಸದಸ್ಯರೂ ಆತ್ಮೀಯವಾಗಿಯೇ, ಅನ್ಯೋನ್ಯವಾಗಿಯೇ ಬೆರೆಯುತ್ತಿರುವುದು ಇಲ್ಲಿನ ವಿಶೇಷ. ಈ ಸಂಪ್ರದಾಯ ಕಳೆದ ವಿಧಾನ ಸಭಾ ಚುನಾವಣೆ ಅಧಿಸೂಚನೆ ಪ್ರಕಟವಾಗುವ ತನಕವೂ ಇತ್ತು.

ಆದರೆ, ಈ ಬಾರಿ ಹಾಗಿಲ್ಲ. ವಿಧಾನ ಸಭಾ ಚುನಾವಣೆ ಮುಗಿದ ಬಳಿಕವೂ ರಾಜಕೀಯ ಕೆಸರೆರಚಾಟ ಮುಂದುವರಿದುಕೊಂಡು ಬಂದಿದೆ. ಇದು ತುಳುನಾಡ ಸೃಷ್ಟಿಕರ್ತ ಪರಶುರಾಮನ ಪ್ರತಿಮೆಯನ್ನೂ ಬಿಡಲಿಲ್ಲ. ಬೈಲೂರಿನ ಈ ಥೀಮ್‌ ಪಾರ್ಕ್‌ ಕಾರ್ಕಳದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮುಕುಟಮಣಿಯಾಗಬೇಕಿತ್ತು. ಆದರೆ ಇದೀಗ ಪ್ರತಿಮೆ ಹೆಸರಲ್ಲಿ ಎಗ್ಗಿಲ್ಲದೇ ರಾಜಕೀಯ ನಡೆಯುತ್ತಿದೆ. ಪ್ರಾರಂಭದಲ್ಲಿ ಮುತಾಲಿಕ್‌ ತಂಡದ ದಿವ್ಯಾ ನಾಯಕ್‌ ಅವರ ನೇತೃತ್ವದಲ್ಲಿ ಪರಶುರಾಮ ಪ್ರತಿಮೆ ನೈಜತೆ ಕುರಿತು ನಡೆದ ಸತ್ಯಾಗ್ರಹ ಬಳಿಕ ರಾಜಕೀಯ ತಿರುವು ಪಡೆಯಿತು. ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳು ಹೇಳಿಕೆ, ಪ್ರಕಟನೆ ನೀಡುವ ಮೂಲಕ ಮತ್ತಷ್ಟು ಗೊಂದಲ ನಿರ್ಮಿಸಲು ಮುಂದಾಗುತ್ತಿದೆ. ರಾಜಕಾರಣಿಗಳ ರಾಜಕೀಯಕ್ಕಾಗಿ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಥೀಮ್‌ ಪಾರ್ಕ್‌ ಅಭಿವೃದ್ಧಿಗೆ ಅಡ್ಡಿಯಾಗುವುದೇ ಎಂಬ ಆತಂಕ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಿದೆ.

ನಿರ್ಮಿತಿ ಕೇಂದ್ರದ ಸ್ಪಷ್ಟನೆ
ಬೈಲೂರು ಥೀಮ್‌ ಪಾರ್ಕ್‌, ಪರಶುರಾಮನ ಪ್ರತಿಮೆ ಪೂರ್ಣವಾಗಿಲ್ಲ. ಪೂರ್ಣವಾಗುವ ಮುನ್ನವೇ ಉದ್ಘಾಟನೆಗೊಳಿಸಲಾಗಿತ್ತು. ಇಲ್ಲಿನ ಕೆಲಸ ಕಾರ್ಯಗಳು ಮುಗಿದ ತಕ್ಷಣ ನಿಯಮದಂತೆ ಮೂರನೇ ಸಂಸ್ಥೆ ವತಿಯಿಂದ ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸಿ ಬಳಿಕ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವುದೆಂದು ಯೋಜನೆ ಕಾಮಗಾರಿ ಕೈಗೆತ್ತಿಕೊಂಡಿರುವ ನಿರ್ಮಿತಿ ಕೇಂದ್ರ ಸ್ಪಷ್ಟಪಡಿಸಿದೆ. ಅಲ್ಲಿ ತನಕ ಬಿಜೆಪಿ ಕಾಂಗ್ರೆಸ್‌ ಪಕ್ಷಗಳೆರಡೂ ಕಾಯುವುದು ಒಳಿತು. ಎರಡೂ ಪಕ್ಷಗಳು ರಾಜಕೀಯ ಬದಿಗಿಟ್ಟು ಕಾರ್ಕಳದ ಅಭಿವೃದ್ಧಿಯತ್ತ ಚಿತ್ತ ಹರಿಸುವುದು ಹೆಚ್ಚು ಸೂಕ್ತ. ಈ ಮಾತೇ ಸಾರ್ವಜನಿಕ ವಲಯದಿಂದಲೂ ಕೇಳಿ ಬರುತ್ತಿದೆ.

ಗೊಂದಲ ನಿವಾರಣೆಯಾಗಲಿ
ಪರಶುರಾಮ ಪ್ರತಿಮೆ ನೈಜತೆ ಕುರಿತು ಎತ್ತಿರುವ ಪ್ರಶ್ನೆ, ಅನುಮಾನಕ್ಕೆ ತೆರೆಬೀಳಬೇಕಿದೆ. ಇದರಿಂದ ಸಮಾಜದಲ್ಲಿ ವಿನಾಃ ಕಾರಣ ಸೃಷ್ಟಿಯಾಗಿರುವ ಗೊಂದಲ ನಿವಾರಣೆಯಾಗಬೇಕಿದೆ. ನೈಜತೆ ಪರಿಶೀಲನೆಯಾದ ಬಳಿಕ ಒಂದು ವೇಳೆ ಗುಣಮಟ್ಟದಲ್ಲಿ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮವಾಗಲಿ. ಆದರೆ, ಅದರ ಹೆಸರಲ್ಲಿ ಕಾರ್ಕಳದಲ್ಲಿ ನೆಲೆಯೂರಿದ್ದ ನೆಮ್ಮದಿಗೆ ಭಂಗವಾಗದಿರಲಿ.

ವರದಿ ಪ್ರಕಟಿಸದಿರಲು ತೀರ್ಮಾನ
ಪರಶುರಾಮ ಪ್ರತಿಮೆ ವಿವಾದದ ಕುರಿತು ಇದುವರೆಗೂ ನ್ಯೂಸ್‌ ಕಾರ್ಕಳ ವರದಿ ಪ್ರಕಟಿಸುತ್ತ ಬಂದಿದೆ. ಆದರೆ ಇನ್ನು ಮುಂದೆ ವರದಿ ಪ್ರಕಟಿಸದೇ ಇರಲು ನ್ಯೂಸ್‌ ಕಾರ್ಕಳ ತೀರ್ಮಾನಿಸಿದೆ. ಎರಡೂ ಪಕ್ಷಗಳ ಹೇಳಿಕೆಯನ್ನು ಪ್ರಕಟಿಸದಿರಲು ನಿರ್ಧರಿಸಿದೆ. ರಾಜಕೀಯ ಮುಖಂಡರು ಈ ಕುರಿತು ಸಹಕರಿಸುವಂತೆ ನ್ಯೂಸ್‌ ಕಾರ್ಕಳ ಬಯಸುತ್ತಿದೆ.































































































































































error: Content is protected !!
Scroll to Top