ಕಾರ್ಕಳ ಕುಲಾಲ ಸುಧಾರಕ ಸಂಘದ 28ನೇ ವಾರ್ಷಿಕ ಸಭೆ

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ – ಪ್ರತಿಭಾ ಪುರಸ್ಕಾರ

ಕಾರ್ಕಳ : ಎಷ್ಟೇ ಎತ್ತರಕ್ಕೆ ಬೆಳೆದರೂ ನಾವು ಬೆಳೆದು ಬಂದ ಹಾದಿಯನ್ನು ಯಾವತ್ತೂ ಮರೆಯಬಾರದು ಎಂದು ಕಾರ್ಕಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಭೋಜ ಕುಲಾಲ ಬೇಳಂಜೆಯವರು ಅಭಿಪ್ರಾಯಪಟ್ಟರು. ಅವರು ಸೆ. 10 ರಂದು ಜೋಡುರಸ್ತೆ ಕುಲಾಲ ಸಭಾಭವನದಲ್ಲಿ ನಡೆದ ಸಂಘದ 28ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಶ್ರೀನಿವಾಸ ನಾರಾಯಣ ಮೂಲ್ಯ ಮಾತನಾಡಿ, ಗೆಲುವು ಖುಷಿ ನೀಡಿದರೆ, ಸೋಲು ಜೀವನ ಪಾಠ ಕಲಿಸುತ್ತದೆ. ಸೋತು ಗೆಲ್ಲುವುದೇ ಜೀವನದ ಮಹತ್ತರ ಸಾಧನೆ ಎಂದರು. ಕಾರ್ಕಳ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಮಾತನಾಡಿ, ಒಂದು ಮನೆಯಲ್ಲಿ ಒಬ್ಬರು ವಿದ್ಯಾವಂತರಾದರೂ ಅದು ಕೇವಲ ಮನೆಗೆ ಮಾತ್ರವಲ್ಲದೆ ಸಮಸ್ತ ಸಮಾಜಕ್ಕೆ ಸಕರಾತ್ಮಕ ಪರಿಣಾಮ ಬೀರುತ್ತದೆ ಎಂದರು.

27ನೇ ವರ್ಷದ ವಾರ್ಷಿಕ ವರದಿ, ಮಹಾಸಭೆ ವರದಿ, ಸಂದೇಶ ವಾಚನ ಹಾಗೂ ಕಾರ್ಯಕಾರಿ ಸಮಿತಿ ಮತ್ತು ಮಹಿಳಾ ಘಟಕದ ಆಯ್ಕೆಯನ್ನು ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಕುಲಾಲ್ ನೆರವೇರಿಸಿದರು. ವರ್ಷದ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಕೃಷ್ಣ ಮೂಲ್ಯ ಮಂಡಿಸಿದರು. ಲೆಕ್ಕ ಪರಿಶೋಧಕರಾಗಿ ವಾಸುದೇವ ರಾವ್ ಸಿಎ ಅವರನ್ನು ಆಯ್ಕೆ ಮಾಡಲಾಯಿತು.

ಸನ್ಮಾನ – ಪ್ರತಿಭಾ ಪುರಸ್ಕಾರ
ಪ್ರಗತಿಪರ ಕೃಷಿಕ ಶಂಕರ ಕುಲಾಲ್ ಬೇಲಾಡಿ, ಕುಂಬಾರಿಕೆಯಲ್ಲಿ ಲೀಲಾ ಕಿಟ್ಟ ಮೂಲ್ಯ ಅಡ್ಕ ವರಂಗ, ಕಂಬಳ ತೀರ್ಪುಗಾರ ಸತೀಶ್ ಹೊಸ್ಮಾರು, ಜ್ಯೂನಿಯರ್ ನ್ಯಾಷನಲ್ ಕಬಡ್ಡಿ ಕ್ರೀಡಾಪಟು ಸುಕೇಶ್ ಕುಲಾಲ್ ಮಾಳ, ದುರ್ಗಾ ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ, ಕಾಂತಾವರ ಗ್ರಾ. ಪಂ. ಉಪಾಧ್ಯಕ್ಷ ಪ್ರಭಾಕರ ಕುಲಾಲ್, ಈದು ಗ್ರಾ. ಪಂ. ಉಪಾಧ್ಯಕ್ಷೆ ಸುಜಾತ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. 90% ಅಧಿಕ ಅಂಕ ಗಳಿಸಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ 75% ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಮಾಡಲಾಯಿತು. ಇದೇ ಸಂದರ್ಭ ಪೆರ್ಡೂರಿನಲ್ಲಿ ನಡೆದ ಡ್ಯಾನ್ಸ್‌ ಕುಲಾಲ್ ಡ್ಯಾನ್ಸ್‌ ಕಾಂಪಿಟೀಶನ್‌ನಲ್ಲಿ ಪ್ರಥಮ ಸ್ಥಾನ ಪಡೆದವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಕಳ ಕುಂಭಶ್ರೀ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಮೂಲ್ಯ, ಜ್ಯೋತಿ ಕೋ- ಓಪರೇಟಿವ್ ಸೊಸೈಟಿಯ ಅಧ್ಯಕ್ಷ ಗಿರೀಶ್ ಬಿ. ಸಾಲಿಯಾನ್, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಾಘು ಮೂಲ್ಯ ಪಾದೆಬೆಟ್ಟು, ಉಪಾಧ್ಯಕ್ಷ ಡೊಂಬಯ್ಯ ಐತು ಮೂಲ್ಯ, ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಕೃಷ್ಣಪ್ಪ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಎಚ್. ನಿಟ್ಟೆ ಉಪಸ್ಥಿತರಿದ್ದರು. ಸನ್ನಿಧಿ ಪ್ರಾರ್ಥಿಸಿ, ಅಕ್ಷತಾ, ಧನ್ಯಾ, ದೀಪ್ತಿ ಹಾಗೂ ಅಕ್ಷತಾ ಕುಲಗೀತೆಯನ್ನು ಹಾಡಿದರು. ಯುವ ವೇದಿಕೆ ಜಿಲ್ಲಾಧ್ಯಕ್ಷ ದಿವಾಕರ್ ಎಂ. ಬಂಗೇರ ಸ್ವಾಗತಿಸಿದರು. ಸತೀಶ್ ಕುಲಾಲ್ ಹೊಸ್ಮಾರು ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೀಕ್ಷಾ ನಿರೂಪಿಸಿದರು

error: Content is protected !!
Scroll to Top