ಗುರುಕುಲ ಪರಂಪರೆಗೆ ಕೊನೆಯ ಮೊಳೆ ಹೊಡೆದರು

ಗುರುಕುಲ ಆಶ್ರಮಗಳ ಸಮಾಧಿಯ ಮೇಲೆ ತಲೆ ಎತ್ತಿದವು ನೂರಾರು ಬ್ರಿಟಿಷ್ ಶಾಲೆಗಳು

ನಾನು ಈಗಾಗಲೇ ಬರೆದಿರುವ ಹಾಗೆ ಇಡೀ ಜಗತ್ತಿಗೆ ಮಾದರಿ ಆಗಿದ್ದ ಮತ್ತು ಭಾರತದ ಸ್ವಾಭಿಮಾನದ ಪ್ರತೀಕವೇ ಆಗಿದ್ದ ಗುರುಕುಲ ಶಿಕ್ಷಣ ಪದ್ಧತಿ ಮುಂದೆ ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಹೊತ್ತಿನಲ್ಲಿ ಸಂಪೂರ್ಣವಾಗಿ ಅವನತಿ ಹೊಂದಿತು. ಏಳು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದ ಒಂದು ಅಪೂರ್ವವಾದ ಮತ್ತು ಇಡೀ ಪ್ರಪಂಚದ ಗಮನ ಸೆಳೆದಿದ್ದ ಶಿಕ್ಷಣ ಪದ್ಧತಿ ನಾಶವಾಗಲು ಕಾರಣಗಳೇನು?

1) ದ್ರೋಣರು ಮನೆ ಪಾಠ ಆರಂಭ ಮಾಡಿದರು

ಮಹಾಭಾರತದಲ್ಲಿ ಕೌರವ ಮತ್ತು ಪಾಂಡವರ ಗುರುವಾಗಿ ಪ್ರಸಿದ್ದಿ(?) ಪಡೆದ ದ್ರೋಣರು ಮೊದಲ ವಿಲನ್ ಆಗಿ ನನಗೆ ಗೋಚರ ಆಗುತ್ತಾರೆ. ಅದುವರೆಗೆ ಇದ್ದ ಗುರುಗಳು ದಟ್ಟ ಕಾಡಿನ ಹಸಿರು ಪರಿಸರದ ನಡುವೆ ಕುಟೀರಗಳನ್ನು ಕಟ್ಟಿಕೊಂಡು ತಮ್ಮ ಗುರುಕುಲ ಆಶ್ರಮಗಳನ್ನು ನಡೆಸುತ್ತಿದ್ದರು. ಆದರೆ ದ್ರೋಣರು ಆಶ್ರಮದ ವ್ಯವಸ್ಥೆಯನ್ನು ಧಿಕ್ಕರಿಸಿ ಹಸ್ತಿನಾವತಿಯ ಅರಮನೆಗೇ ಬಂದು ಬೀಡುಬಿಟ್ಟರು.

ಅಂದರೆ ರಾಜಾಶ್ರಯದ ಆಸೆಗೆ ಬಲಿ ಬಿದ್ದು ಅರಮನೆಗೆ ಬಂದು ಮನೆ ಪಾಠ ಆರಂಭ ಮಾಡಿದರು. ಅಷ್ಟೇ ಅಲ್ಲದೆ ವಿದ್ಯೆಯನ್ನು ಕೇಳಿಕೊಂಡು ಬಂದ ಏಕಲವ್ಯ ಎಂಬ ಮುಗ್ಧ ಹುಡುಗನ ಹೆಬ್ಬೆರಳು ಕತ್ತರಿಸಿ ಅವನ ಭವಿಷ್ಯವನ್ನು ನಾಶ ಮಾಡಿದರು. ಅದರ ಜತೆಗೆ ಅರ್ಜುನನನ್ನು ಜಗತ್ತಿನ ಶ್ರೇಷ್ಠ ಬಿಲ್ಲುಗಾರನಾಗಿ ಮಾಡುವ ತೆವಲಿಗೆ ಬಿದ್ದು ಉಳಿದವರನ್ನು ತುಳಿಯಲು ನೋಡಿದರು. ಇದು ಯಾವ ಗುರುವೂ ಮಾಡಬಾರದ ತಪ್ಪು. ಅದರಿಂದ ಮೊದಲ ಖಳನಾಗಿ ನನಗೆ ಗೋಚರ ಆಗುವುದು ಅದೇ ಗುರು ದ್ರೋಣರು.

2) ವಿದೇಶಿ ಆಕ್ರಮಣಕಾರರು

ಭಾರತದಲ್ಲಿ ಇದ್ದ ಸಂಪತ್ತು ಮತ್ತು ಸಂಪನ್ಮೂಲಗಳ ಆಸೆಗೆ ಬಿದ್ದು ಹಲವು ವಿದೇಶಿ ಆಕ್ರಮಣಕಾರರು 11ನೆಯ ಶತಮಾನದಿಂದ ಭಾರತದ ಮೇಲೆ ದಂಡೆತ್ತಿಕೊಂಡು ಬಂದರು. ಅವರ ಕೆಟ್ಟ ದೃಷ್ಟಿಯು ನಮ್ಮ ಗುರುಕುಲಗಳ ಮೇಲೆ ಮತ್ತು ನಮ್ಮ ಪ್ರಾಚೀನ ವಿವಿಗಳ ಮೇಲೆ ಬಿದ್ದಿತ್ತು. ಹನ್ನೊಂದನೇ ಶತಮಾನದ ಕೊನೆಯ ವರ್ಷಗಳಲ್ಲಿ ತನ್ನ ಸೈನಿಕರ ದಂಡು ಕಟ್ಟಿಕೊಂಡು ಬಂದ ಭಕ್ತಿಯಾರ್ ಖಿಲ್ಜಿ ಆಗ ಇಡೀ ಜಗತ್ತಿನ ಆಕರ್ಷಣೆ ಆಗಿದ್ದ ನಳಂದಾ ವಿವಿಯ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದನು. ಆಗ ಅಲ್ಲಿ ಸಂಗ್ರಹ ಇದ್ದ ಸಾವಿರಾರು ತಾಳೆಗರಿ ಮತ್ತು ಇತರ ಅಮೂಲ್ಯ ಗ್ರಂಥಗಳು ಧಗ ಧಗ ಎಂದು ಹಲವು ತಿಂಗಳ ಕಾಲ ಹೊತ್ತಿ ಉರಿದವು. ಈ ಕೃತ್ಯದ ಹಿಂದೆ ಅವನ ಉದ್ದೇಶ ಏನಿತ್ತು?

ಆಶ್ಚರ್ಯ ಆದರೂ ನಿಜ. ನೀವು, ನಾವು ನಂಬಲೇ ಬೇಕು. ಆ ಬೂದಿಯ ರಾಶಿ ಮುಂದೆ ಕಣ್ಣೀರು ಸುರಿಸುತ್ತ ನಿಂತ ನಮ್ಮ ವಿದ್ವಾಂಸರು, ಗುರುಗಳು ತಮ್ಮ ಅದ್ಭುತವಾದ ಮೆಮೊರಿ ಪವರ್ ಬಳಸಿಕೊಂಡು ಅಷ್ಟೂ ಗ್ರಂಥಗಳನ್ನು ಮತ್ತೆ ಬರೆದು ಮುಗಿಸಿದರು ಎಂಬ ಉಲ್ಲೇಖವೂ ಒಂದೆಡೆ ನಮಗೆ ದೊರೆಯುತ್ತದೆ. ಇದು ಜಗತ್ತಿನಲ್ಲಿಯೇ ಮೊದಲಾಗಿ ನಡೆದ ಘಟನೆ ಎಂದು ನನ್ನ ಭಾವನೆ. ಆದರೆ ಭಕ್ತಿಯಾರ್ ಖಿಲ್ಜಿ ಮತ್ತು ಆನಂತರ ಬಂದ ಹಲವು ವಿದೇಶಿ ಆಕ್ರಮಣಕಾರರು ಭಾರತದ ವಿವಿಗಳ ಜ್ಞಾನ ಸಂಪತ್ತು ನಾಶ ಮಾಡಲು ಮಾಡಿದ ಪ್ರಯತ್ನಗಳನ್ನು ನಾವು ಕ್ಷಮಿಸುವುದು ಹೇಗೆ?

3) ಮ್ಯಾಕ್ಸ್ ಮುಲ್ಲರ್ ಎಂಬ ಜರ್ಮನ್ ವಿದ್ವಾಂಸ

ಈ ಜರ್ಮನ್ ವಿದ್ವಾಂಸ ಇಂಗ್ಲೆಂಡಿನಲ್ಲಿ ಶಿಕ್ಷಣವನ್ನು ಮುಗಿಸಿ ವಿದ್ವಾಂಸನಾಗಿ ಕೀರ್ತಿ ಪಡೆಯುತ್ತಾನೆ. ಅವನಿಗೆ ಬ್ರಿಟಿಷರು ಭಾರತದ ವೇದಗಳು ಮತ್ತು ಇತರ ಮಹಾಕಾವ್ಯಗಳನ್ನು ಅಧ್ಯಯನ ಮಾಡಿ ಇಂಗ್ಲಿಷ್ ಭಾಷೆಗೆ ಅನುವಾದ ಮಾಡುವ ಹೊಣೆಯನ್ನು ಹೊರಿಸುತ್ತಾರೆ. ಅದಕ್ಕಾಗಿ ಭಾರತದ ಜ್ಞಾನ ಸಂಪತ್ತನ್ನು ಸೂರೆ ಮಾಡಲು ಹೊರಟ ಮ್ಯಾಕ್ಸ್ ಮುಲ್ಲರ್ ಅವುಗಳನ್ನು ಓದುತ್ತಾ ಓದುತ್ತಾ ಭಾರಿ ಪ್ರಭಾವಿತ ಆಗುತ್ತಾನೆ. ಭಾರತೀಯ ಅಧ್ಯಾತ್ಮ ಜ್ಞಾನವನ್ನು ಇಂಗ್ಲಿಷ್ ಮಾತ್ರವಲ್ಲ ಜಗತ್ತಿನ ಬೇರೆ ಯಾವ ಭಾಷೆಗೂ ಅನುವಾದ ಮಾಡಲು ಸಾಧ್ಯವೇ ಇಲ್ಲ ಎಂದು ಬ್ರಿಟಿಷ್ ಸರಕಾರಕ್ಕೆ ಷರಾ ಬರೆಯುತ್ತಾನೆ. ಅಷ್ಟು ಮಾತ್ರವಲ್ಲ ಭಾರತೀಯ ಶಿಕ್ಷಣ ಪದ್ಧತಿಯ ಬೇರುಗಳು ತುಂಬಾ ಬಲವಾಗಿವೆ, ಅವುಗಳನ್ನು ಅಲ್ಲಾಡಿಸಲು ಸಾಧ್ಯವೇ ಇಲ್ಲ, ಅವುಗಳನ್ನು ಅಲ್ಲಾಡಿಸಬೇಕು ಅಂತಾದರೆ ಗುರುಕುಲ ಶಿಕ್ಷಣ ಪದ್ಧತಿಯ ಬುಡವನ್ನು ಕತ್ತರಿಸಬೇಕು ಎಂದು ಬ್ರಿಟಿಷ್ ಸರಕಾರಕ್ಕೆ ಉಪದೇಶ ಕೂಡ ಮಾಡುತ್ತಾನೆ.

4) ಮೆಕಾಲೆ ಎಂಬ ಮಹಾ ಕುಹಕಿ ಮತ್ತು ಸಂಚುಕೋರ

‘ಬ್ರಿಟಿಷ್ ಶಿಕ್ಷಣ ತಜ್ಞ’ ಎಂದು ಕರೆಸಿಕೊಂಡ ಲಾರ್ಡ್ ಮೆಕಾಲೆ ಗುರುಕುಲ ಶಿಕ್ಷಣ ಪದ್ಧತಿಗೆ ಕೊನೆಯ ಮೊಳೆ ಹೊಡೆದ ಕೀರ್ತಿ(?)ಯನ್ನು ಹೊಂದಿದ್ದಾನೆ. ಆತ ಭಾರತದಲ್ಲಿ ‘ಬ್ರಿಟಿಷ್ ಶಿಕ್ಷಣ ಪದ್ಧತಿಯ ಜನಕ ‘ಎಂದು ಕರೆಸಿಕೊಳ್ಳುತ್ತಾನೆ. ಆತನು ಶಿಕ್ಷಣದ ಸಾರ್ವತ್ರಿಕರಣದ ನೆಪದಲ್ಲಿ 1835ರಲ್ಲಿ ಬ್ರಿಟಿಷ್ ಸರಕಾರಕ್ಕೆ ಒಂದು ಪ್ರಸ್ತಾವನೆಯನ್ನು ಸಲ್ಲಿಸುತ್ತಾನೆ. ಅದರಲ್ಲಿ ಆತ ಹೇಳಿದ್ದನ್ನು ಸ್ವಲ್ಪ ಕಿವಿಗೊಟ್ಟು ಕೇಳಿ….

‘ಆ ಕಾಲದಲ್ಲಿಯೂ ಭಾರತದಲ್ಲಿ 7,32,000 ಗುರುಕುಲಗಳು ಜೀವಂತವಾಗಿವೆ. ಗ್ರಾಮ ಗ್ರಾಮಗಳಲ್ಲಿ ಗುರುಕುಲಗಳು ಇವೆ. ನಾವೇನೇ ಮಾಡಿದರೂ ಭಾರತದ ಸಂಸ್ಕೃತಿಯ ಒಂದು ಇಟ್ಟಿಗೆಯನ್ನು ಕೂಡ ಅಲುಗಾಡಿಸಲು ಸಾಧ್ಯವಿಲ್ಲ. ನಾವು ಮಾಡಬೇಕಾದದ್ದು ಏನೆಂದರೆ ಗುರುಕುಲಕ್ಕೆ ಪರ್ಯಾಯವಾಗಿ ಬ್ರಿಟಿಷ್ ಶಾಲೆಗಳನ್ನು ಸರಕಾರವೇ ತೆರೆಯಬೇಕು. ಅವುಗಳು ಉಚಿತ ಶಿಕ್ಷಣವನ್ನು ಆರಂಭದಲ್ಲಿ ನೀಡಬೇಕು. ಅದರ ಪಠ್ಯ ವಿಷಯ, ಪಠ್ಯ ಕ್ರಮ ಮತ್ತು ಪಠ್ಯ ಪುಸ್ತಕ ಎಲ್ಲವನ್ನೂ ಬ್ರಿಟಿಷ್ ಸರಕಾರವೇ ರೂಪಿಸಬೇಕು. ಭಾರತೀಯರು ದೇಶದ ನೈಜ ಇತಿಹಾಸವನ್ನು ಎಂದಿಗೂ ಓದಬಾರದು. ಆ ಶಿಕ್ಷಣ ಪದ್ಧತಿ ಹೇಗಿರಬೇಕು ಎಂದರೆ ಈ ಭಾರತೀಯರು ತಮ್ಮ ದೇಶದ ಸಂಸ್ಕೃತಿಯನ್ನು ದ್ವೇಷ ಮಾಡಬೇಕು. ಅದರ ಪರಿಣಾಮವಾಗಿ ಮುಂದೆ ಭಾರತದಲ್ಲಿ ಹಿಂದೂಗಳ ಕಪ್ಪು ಚರ್ಮ ಇರುವ ಮತ್ತು ಬ್ರಿಟಿಷರ ಮೆದುಳು ಇರುವ ಯುವಜನಾಂಗ ರೂಪುಗೊಳ್ಳಬೇಕು. ಇದು ನನ್ನ ಶಾಲಾ ಶಿಕ್ಷಣ ಪದ್ಧತಿಯ ಉದ್ದೇಶ ಆಗಿರಬೇಕು ಎಂದು ಹೇಳಿದ್ದಾನೆ.

ಮೆಕಾಲೆಯ ಈ ಶಿಫಾರಸು ಮೇರೆಗೆ ಬ್ರಿಟಿಷ್ ಸರಕಾರ ತನ್ನದೇ ಶಾಲೆಗಳನ್ನು ದೇಶಾದ್ಯಂತ ತೆರೆಯಿತು. ಗುರುಕುಲ ಶಿಕ್ಷಣ ಪದ್ಧತಿಯ ಅವನತಿಗೆ ಮೆಕಾಲೆ ಶಿಫಾರಸ್ಸುಗಳು ಮುಖ್ಯ ಕಾರಣ ಆದವು. ಕ್ರಮೇಣ ಗುರುಕುಲ ಆಶ್ರಮಗಳ ಸಮಾಧಿಯ ಮೇಲೆ ನೂರಾರು ಬ್ರಿಟಿಷ್ ಶಾಲೆಗಳು ರೂಪುಗೊಂಡವು. ಗುರುಕುಲಗಳು ಹೆಚ್ಚು ಕಡಿಮೆ ಅವನತಿಯ ಹಾದಿ ಹಿಡಿದವು.

ಒಂದು ರೀತಿಯಲ್ಲಿ ಶಾಲೆಗಳು ಆರಂಭ ಆದ ನಂತರ ಹೆಚ್ಚು ಹೆಚ್ಚು ಮಂದಿ ಶಿಕ್ಷಣದ ಅವಕಾಶ ಪಡೆಯಲು ಸಾಧ್ಯವಾಯಿತು. ಅದನ್ನು ಖಂಡಿತವಾಗಿ ನಾವು ಮೆಚ್ಚಲೇಬೇಕು. ಆದರೆ ನಮ್ಮ ರಾಷ್ಟ್ರದ ಅಸ್ಮಿತೆಗಳಾಗಿದ್ದ ಗುರುಕುಲಗಳು ನಾಶವಾದ ನೋವು ಮರೆತು ಹೋಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ನಮ್ಮ ಹಿರಿಯರು ವಿರೋಧಿಸಿಕೊಂಡು ಬಂದಿದ್ದ ಶಿಕ್ಷಣದ ವ್ಯಾಪಾರೀಕಣಕ್ಕೆ ಅದು ದಾರಿ ಮಾಡಿ ಕೊಟ್ಟಿತು.

ಉಪಸಂಹಾರ

ಈ ತಪ್ಪನ್ನು ಸಣ್ಣ ಮಟ್ಟಿಗಾದರೂ ಸರಿಪಡಿಸುವ ಒಂದು ಅಪೂರ್ವ ಅವಕಾಶವು ನಮ್ಮ ಭಾರತ ಸರಕಾರದ ಕಾಲಬುಡಕ್ಕೆ ಒಮ್ಮೆ ಬಂದಿತ್ತು. ಸ್ವಾತಂತ್ರ್ಯ ಪಡೆದ ನಂತರ ಮೊದಲ ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯು ರೂಪುಗೊಳ್ಳುವ ಹೊತ್ತಿನಲ್ಲಿ ಭಾರತದ್ದೇ ಆದ ಗುರುಕುಲ ಶಿಕ್ಷಣ ಪದ್ಧತಿಯನ್ನು ಮತ್ತೆ ಸರಕಾರ ಆರಂಭ ಮಾಡಬಹುದಾಗಿತ್ತು. ಅಥವಾ ಗುರುಕುಲ ಶಿಕ್ಷಣ ಪದ್ಧತಿಯ ಕೆಲವು ಗುಣಾತ್ಮಕವಾದ ಅಂಶಗಳನ್ನು ನಮ್ಮ ಶಿಕ್ಷಣ ಪದ್ಧತಿಯಲ್ಲಿ ಅಳವಡಿಕೆ ಆದರೂ ಮಾಡಬಹುದಾಗಿತ್ತು. ಆದರೆ ನಮ್ಮ ಸರಕಾರಗಳು ಅದ್ಯಾವುದನ್ನೂ ಮಾಡಲಿಲ್ಲ. ಇಂದಿಗೂ ನಮ್ಮ ವಿದ್ಯಾರ್ಥಿಗಳು ಬ್ರಿಟಿಷರು ಬರೆದ ತಪ್ಪು ಇತಿಹಾಸವನ್ನು ಓದುತ್ತಿದ್ದಾರೆ.
ನಮ್ಮ ದೇಶದ ಯುವಜನತೆಯಲ್ಲಿ ರಾಷ್ಟ್ರಪ್ರೇಮದ ಒರತೆ ಬತ್ತಿ ಹೋಗಲು ಇದು ಕಾರಣವಾಯಿತು. ಇಂದು ಭಾರತದಲ್ಲಿ ಶಿಕ್ಷಣವು ಅತಿ ದೊಡ್ಡ ವ್ಯಾಪಾರವಾಗಿ ಮಾರ್ಪಾಡು ಆಯಿತು. ನಿಮಗೆ ಹಾಗೆ ಅನ್ನಿಸುತ್ತಿದೆಯಾ?

error: Content is protected !!
Scroll to Top