ಈ ಮಲಯಾಳಂ ನಾಯಕ ನಟನ ದಾಖಲೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ!
ಈಗಿನ ನಮ್ಮ ಸಾಕಷ್ಟು ಮಾಸ್ ಹೀರೊಗಳು ಹತ್ತಿಪ್ಪತ್ತು ವರ್ಷಗಳ ಅವಧಿಯಲ್ಲಿ 100-120ರಷ್ಟು ಸಿನೆಮಾಗಳಲ್ಲಿ ಅಭಿನಯ ಮಾಡಿ ಅಷ್ಟಕ್ಕೆ ಸುಸ್ತು ಹೊಡೆಯುತ್ತಾರೆ. ತಮ್ಮ ವರ್ಚಸ್ಸು ಕಳೆದುಕೊಂಡ ನಂತರ ಸವಕಲು ನಾಣ್ಯ ಆಗುತ್ತಾರೆ. ಆದರೆ ಈ ಮಲಯಾಳಂ ಸಿನೆಮಾ ಸೂಪರ್ಸ್ಟಾರ್ ಅಭಿನಯಿಸಿದ್ದು ಬರೋಬ್ಬರಿ 700ಕ್ಕಿಂತ ಹೆಚ್ಚು ಸಿನೆಮಾಗಳಲ್ಲಿ. ಅವುಗಳಲ್ಲಿ ಶೇ.90 ಸಿನೆಮಾಗಳಲ್ಲಿ ಅವರು ಹೀರೊ ಆಗಿಯೇ ಅಭಿನಯ ಮಾಡಿದ್ದಾರೆ.
1952ರಿಂದ 1985ರವರೆಗೆ ಅಂದಾಜು ಮೂವತ್ತಮೂರು ವರ್ಷಗಳ ಅವಧಿಯಲ್ಲಿ ಅವರಿಗೆ ಮಲಯಾಳಂ ಸಿನೆಮಾ ರಂಗದಲ್ಲಿ ಸ್ಪರ್ಧೆಯೇ ಇರಲಿಲ್ಲ. ಒಂದೊಂದು ವರ್ಷ 30-40 ಸಿನೆಮಾಗಳಲ್ಲಿ ಅಭಿನಯ ಮಾಡುವುದು ಸುಲಭ ಅಲ್ಲ.
ಆತ ಪ್ರೇಮ್ ನಝೀರ್

ಮಲಯಾಳಂ ಚಿತ್ರರಂಗದಲ್ಲಿ ‘ಎವರ್ ಗ್ರೀನ್ ಹೀರೋ’ ಎಂದು ಕರೆಸಿಕೊಂಡವನು. ಆತ ಕ್ರಿಯೇಟ್ ಮಾಡಿದ್ದು ಹತ್ತಾರು ಗಿನ್ನೆಸ್ ದಾಖಲೆಗಳನ್ನು. ಆತನು ಅಭಿನಯ ಮಾಡಿದ ಸಿನೆಮಾಗಳ ಸಕ್ಸಸ್ ರೇಟ್ ಕೂಡ ಶೇ.80 ಆಗಿತ್ತು. ರೊಮ್ಯಾಂಟಿಕ್, ಐತಿಹಾಸಿಕ, ಜಾನಪದ, ಪೌರಾಣಿಕ, ಆಕ್ಷನ್ ಮೊದಲಾದ ಎಲ್ಲ ವೈವಿಧ್ಯಮಯ ಸಿನೆಮಾಗಳಲ್ಲಿ ಅವರು ಅಭಿನಯ ಮಾಡಿದ್ದಾರೆ.
ಮಲಯಾಳಂ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ದೀರ್ಘ ಕಾಲ ಮೆರೆದ ಪ್ರೇಮ್ ನಝೀರ್ ಕಾಲೇಜು ದಿನಗಳಲ್ಲಿ ನಾಟಕದ ಕಲಾವಿದ ಆಗಿ ಮಿಂಚಿದವರು.1951ರಲ್ಲಿ ಅವರು ಶೇಕ್ಸಪಿಯರ್ ಬರೆದ The Merchant of Venice ನಾಟಕದಲ್ಲಿ ಶೈಲಾಕ್ ಪಾತ್ರದಲ್ಲಿ ನೂರಾರು ಬಾರಿ ಅಭಿನಯ ಮಾಡಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದವರು. 1952ರಲ್ಲಿ ‘ಮರು ಮಕ್ಕಲ್’ ಎಂಬ ಸಿನೆಮಾದ ಮೂಲಕ ಸಿನೆಮಾರಂಗವನ್ನು ಪ್ರವೇಶಿಸಿದ ಅವರು 1985ರಲ್ಲಿ ‘ವೆಲ್ಲಾನಿಕ ಪಟ್ಟಣಂ’ ಸಿನೆಮಾದ ಮೂಲಕ ತನ್ನ ಚಿತ್ರಗಳ ಪ್ರಯಾಣ ಮುಗಿಸಿದರು. ಅಂದರೆ ಒಟ್ಟು ಮೂವತ್ತಮೂರು ವರ್ಷ ಅವರೇ ಮಲಯಾಳಂ ಸಿನಿಮಾರಂಗಕ್ಕೆ ಸ್ಟಾರ್.
ಚಿತ್ರ ಜೀವನದಲ್ಲಿ ಪ್ರೇಮ್ ನಝೀರ್ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಸಾಮಾಜಿಕ, ಪತ್ತೆದಾರ, ಪೌರಾಣಿಕ, ಐತಿಹಾಸಿಕ, ಕಲಾತ್ಮಕ, ಜಾನಪದ, ತಿಳಿಹಾಸ್ಯ, ರೊಮ್ಯಾಂಟಿಕ್, ಕಥಾ ಪ್ರಧಾನ ಮೊದಲಾದ ಎಲ್ಲ ರೀತಿಯ ವೈವಿಧ್ಯಮಯ ಸಿನೆಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಪ್ರತಿ ದಿನ ಮೂರು ಮೂರು ಶಿಫ್ಟ್ಗಳಲ್ಲಿ ಅಭಿನಯಿಸಿದರೂ ಅವರು ಒಂದಿಷ್ಟು ದಣಿವು ಇಲ್ಲದೆ ಮತ್ತೆ ಬಂದು ಕ್ಯಾಮೆರಾದ ಮುಂದೆ ನಿಲ್ಲುತ್ತಿದ್ದರು. ಅವರು ಚಿರಂಜೀವಿ ನಟ. ಹಾಗೆಯೇ ಗಿನ್ನೆಸ್ ವಿಶ್ವ ದಾಖಲೆಯ ಮೇರುನಟ.

ಅವರ ಗಿನ್ನೆಸ್ ದಾಖಲೆಗಳ ವಿವರ ನೋಡಿದರೆ ನೀವು ಖಂಡಿತ ಅಚ್ಚರಿ ಪಡುತ್ತೀರಿ
1) ಒಟ್ಟು ಏಳುನೂರು ಸಿನೆಮಾಗಳಲ್ಲಿ ಅಭಿನಯ. ಅದರಲ್ಲೂ 570 ಸಿನೆಮಾಗಳಲ್ಲಿ ಹೀರೋ ಆಗಿ ಅಭಿನಯ. ಎರಡೂ ದಾಖಲೆಗಳು.
2) ಚಿತ್ರ ಜೀವನದಲ್ಲಿ 85 ನಾಯಕಿಯರ ಜತೆಗೆ ಅಭಿನಯ ಕೂಡ ಗಿನ್ನೆಸ್ ದಾಖಲೆ!
3) ಖ್ಯಾತ ನಟಿ ಶೀಲಾ ಜತೆಗೆ ಅವರು 130 ಯಶಸ್ವಿ ಸಿನೆಮಾಗಳಲ್ಲಿ ಹೀರೊ. ಈ ದಾಖಲೆಯನ್ನು ಮುಂದೆ ಕೂಡ ಯಾರೂ ಮುರಿಯುವ ಹಾಗೆ ಇಲ್ಲ.
4) ಖ್ಯಾತ ಹಾಸ್ಯನಟ ಆಡೂರ್ ಬಾಸಿ ಜತೆಗೆ ನೂರಕ್ಕಿಂತ ಹೆಚ್ಚು ಸಿನೆಮಾಗಳು.
5) 1973ರಲ್ಲಿ ಮೂವತ್ತು ಸಿನೆಮಾ ಬಿಡುಗಡೆ, 1977ರಲ್ಲಿ ಮತ್ತೆ ಮೂವತ್ತು, 1979ರಲ್ಲಿ ಬರೋಬ್ಬರಿ 39 ಸಿನೆಮಾ. ಎಲ್ಲವೂ ದಾಖಲೆ.
6) ಒಟ್ಟು 40 ಸಿನೆಮಾಗಳಲ್ಲಿ ದ್ವಿಪಾತ್ರದ ನಿರ್ವಹಣೆಯೂ ದಾಖಲೆ. ಮೂರು ಸಿನೆಮಾಗಳಲ್ಲಿ ತ್ರಿಪಾತ್ರ ನಿರ್ವಹಣೆ.
7) ಕರ್ನಾಟಕ ಸಂಗೀತ ಆಳವಾಗಿ ಅಭ್ಯಾಸ ಮಾಡಿದ್ದ ಅವರು ಹಲವು ಹಾಡುಗಳನ್ನು ಹಾಡಿದ್ದಾರೆ.
8) ಒಬ್ಬನೇ ನಟನಿಗೆ ಅತಿ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ ಅದು ಯೇಸುದಾಸ್ ಹೆಸರಿನಲ್ಲಿ ಇದೆ. ಪ್ರೇಮ್ ನಝೀರ್ ಅವರಿಗಾಗಿ ಯೇಸುದಾಸ್ ಹಾಡಿದ್ದು ಹಲವು ಸಾವಿರ ಹಾಡುಗಳನ್ನು.

9) ರಾಮ, ಕೃಷ್ಣ, ಅಯ್ಯಪ್ಪ ಮೊದಲಾದ ಪೌರಾಣಿಕ ಪಾತ್ರಗಳಲ್ಲಿ ಕೂಡ ಅವರು ಸೊಗಸಾಗಿ ಅಭಿನಯ ಮಾಡಿದ್ದಾರೆ.
10) ತನ್ನ ಪ್ರಭಾವಗಳನ್ನು ಬಳಸಿ ನೂರಾರು ಹೊಸ ಕಲಾವಿದರನ್ನು ಸಿನೆಮಾ ರಂಗಕ್ಕೆ ಪರಿಚಯ ಮಾಡಿದ್ದು ಪ್ರೇಮ್ ನಝೀರ್ ಅವರ ಸಾಧನೆ. ಜಯನ್, ಸತ್ಯನ್, ಜಯಸುಧ, ಮೋಹನ್ ಲಾಲ್, ಮಮ್ಮುಟ್ಟಿ ಮೊದಲಾದ ಹಲವು ಅತ್ಯುತ್ತಮ ಕಲಾವಿದರು ಪ್ರೇಮ್ ನಝೀರ್ ಅವರ ಶಿಫಾರಸ್ಸು ಬಳಸಿಕೊಂಡು ಸಿನೆಮಾರಂಗಕ್ಕೆ ಪದಾರ್ಪಣೆ ಮಾಡಿ ಮುಂದೆ ಮಿಂಚಿದವರು.
11) ಸಾವಿರಾರು ಮಂದಿಗೆ ಪ್ರಚಾರ ಬಯಸದೆ ಅವರು ಸಹಾಯ ಮಾಡಿದ್ದ ಉದಾಹರಣೆಗಳು ಇವೆ.
12) ತನ್ನ ಜತೆ ಅಭಿನಯ ಮಾಡಿದ ಎಲ್ಲ ನಟಿಯರ ಜತೆ ಅವರ ಬಗ್ಗೆ ಗಾಸಿಪ್ ಹರಡಿದರೂ ಅದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಕಲೆಯಲ್ಲಿ ಮುಳುಗಿ ಬಿಟ್ಟವರು ಪ್ರೇಮ್ ನಝೀರ್.
13) ಅವರ ಯಾವುದೇ ಸಿನೆಮಾ ಸೋತರೂ ಆ ಸಿನೆಮಾದ ನಿರ್ಮಾಪಕರನ್ನು ಅವರೇ ಸಂಪರ್ಕ ಮಾಡಿ ಇನ್ನೊಂದು ಸಿನೆಮಾಕ್ಕೆ ಡೇಟ್ ಕೊಟ್ಟು ಸಂಭಾವನೆ ಪಡೆಯದೆ ಅಭಿನಯ ಮಾಡುತ್ತಿದ್ದರು.
14) 55ನೇ ವರ್ಷದಲ್ಲಿ ಕೂಡ ಅವರು ಕಾಲೇಜು ಹುಡುಗನ ಹಲವು ಪಾತ್ರಗಳನ್ನು ಮಾಡಿದ್ದಾರೆ.
ಪ್ರೇಮ್ ನಝೀರ್ ಸಾಯುವ ಮೊದಲು ಹೇಳಿದ ಮಾತು
ಇಷ್ಟೆಲ್ಲ ದಾಖಲೆಗಳನ್ನು ಸೃಷ್ಟಿಸಿದ ಪ್ರೇಮ್ ನಝೀರ್ 1989ರಲ್ಲಿ ನಿಧನರಾಗುವ ದಿನ ಹೇಳಿದ ಮಾತು ನಿಜಕ್ಕೂ ಶ್ಲಾಘನೀಯ.
‘ನನ್ನ ಇನ್ನೂ ಕೆಲವು ಕನಸಿನ ಪಾತ್ರಗಳು ಬಾಕಿ ಆಗಿವೆ. ದೇವರು ಇನ್ನೊಂದು ಜನ್ಮ ಕೊಟ್ಟರೆ ಆ ಕನಸುಗಳನ್ನು ಪೂರ್ತಿ ಮಾಡಿಯೇ ಮಾಡುತ್ತೇನೆ!’











































