ಆರೋಪಿ ವಿದ್ಯಾರ್ಥಿನಿಯರ ಹೆತ್ತವರಿಗೆ ಪಿಎಫ್‌ಐ ನಂಟು ಇರುವ ಅನುಮಾನ
ಉಡುಪಿ: ಶೌಚಾಲಯದಲ್ಲಿ ಹಿಂದು ಹುಡುಗಿಯರ ವೀಡೀಯೋ ಶೂಟಿಂಗ್ ಪ್ರಕರಣ ನಡೆದಿರುವ ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಅಬ್ದುಲ್ ಖಾದರ್ ಈ ಬಗ್ಗೆ ಧ್ವನಿಯೆತ್ತಿದ ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿದ್ದಾರೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಬುಧವಾರ ಗಂಭೀರ ಅರೋಪ ಮಾಡಿದ್ದಾರೆ.
ಆರೋಪಿಗಳ ವಿರುದ್ಧ ಧ್ವನಿ ಎತ್ತಿದ್ದ ವಿದ್ಯಾರ್ಥಿನಿಯರಿಗೆ ಆಡಳಿತಾಧಿಕಾರಿ ಬೆದರಿಕೆ ಹಾಕಿದ್ದಾರೆ. ವಿದ್ಯಾರ್ಥಿನಿಯರ ಅಂಕಪಟ್ಟಿ ತೆಗೆದಿಟ್ಟು ವೀಡಿಯೋ ಬಗ್ಗೆ ಮಾತನಾಡಬಾರದೆಂದು ತಾಕೀತು ಮಾಡಿದ್ದಾರೆ ಎಂದು ಯಶ್‌ಪಾಲ್ ಸುವರ್ಣ ಹೇಳಿದ್ದಾರೆ. ಠಾಣೆಯಲ್ಲಿ ದೂರು ದಾಖಲಾದರೆ ಎಲ್ಲಿಯೂ ನಿಮಗೆ ಕೆಲಸ ಸಿಗುವುದಿಲ್ಲ, ವಿದೇಶಕ್ಕೂ ನೌಕರಿಗಾಗಿ ಹೋಗಲು ಸಾಧ್ಯವಾಗುವುದಿಲ್ಲ ಎಂದು ಹೆದರಿಸಿ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ ಎಂದು ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.
ಮೂವರು ಆರೋಪಿ ಬಾಲಕಿಯರ ತಂದೆಯಂದಿರುವ ನಿಷೇಧಿತ ಪಿಎಫ್‌ಐ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಶಂಕೆಯಿದೆ. ಈ ವಿಷಯವನ್ನು ಉಡುಪಿ ಎಸ್ಪಿ ಅವರ ಗಮನಕ್ಕೆ ತರಲಾಗಿದ್ದು, ಈ ಕೋನದಿಂದಲೂ ಪ್ರಕರಣದ ತನಿಖೆ ನಡೆಸುವಂತೆ ಎಸ್ಪಿಗೆ ಒತ್ತಾಯಿಸಲಾಗಿದೆ. ಪ್ಯಾರಾಮೆಡಿಕಲ್ ಕಾಲೇಜು ಬಳಿ ಮುಸ್ಲಿಂ ಹುಡುಗರು ತಿರುಗಾಡುತ್ತಿದ್ದರು. ಆದ್ದರಿಂದ ಪೊಲೀಸರು ಕಾಲೇಜು ಆವರಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಬೇಕು ಎಂದು ಶಾಸಕರು ಹೇಳಿದರು.
ಈ ಸಂಬಂಧ ಆ. 4ರಂದು ಉಡುಪಿ ಜಿಲ್ಲೆಯ ಬಿಜೆಪಿಯ ಐವರು ಶಾಸಕರು ರಾಜ್ಯಪಾಲರನ್ನು ಭೇಟಿ ಈ ಪ್ರಕರಣದ ಎಸ್‌ಐಟಿ ತನಿಖೆಗೆ ಒತ್ತಾಯಿಸಲಿದ್ದಾರೆ ಎಂದು ಯಶಪಾಲ್ ಸುವರ್ಣ ತಿಳಿಸಿದ್ದಾರೆ.
ಈ ನಡುವೆ ವೀಡಿಯೋದ ವರದಿ ನೀಡಲು ಎಫ್‌ಎಸ್‌ಎಲ್ ತಜ್ಞರುಆಗಸ್ಟ್ 25ರವರೆಗೆ ಕಾಲಾವಕಾಶ ಕೋರಿದ್ದಾರೆ. ಆದರೆ ಪೊಲೀಸರು ತ್ವರಿತವಾಗಿ ಎಫ್‌ಎಸ್‌ಎಲ್ ವರದಿ ನೀಡುವಂತೆ ಕೇಳಿದ್ದು, ತ್ವರಿತವಾಗಿ ವರದಿ ಸಿಕ್ಕರೆ ಇದು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಆರೋಪಿ ಹುಡುಗಿಯರ ಸಂಪರ್ಕದಲ್ಲಿದ್ದ ಇತರ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಪಾದಿತ ವೀಡಿಯೊವನ್ನು ಅಳಿಸುವ ಮೊದಲು ಬೇರೆ ಯಾವುದೇ ಫೋನ್‌ಗಳಿಗೆ ಕಳುಹಿಸಲಾಗಿದೆಯೇ ಎಂಬುದನ್ನು ಪತ್ತೆ ಮಾಡಬಹುದು. ಪೊಲೀಸರ ಬೇಡಿಕೆಗೆ ಸ್ಪಂದಿಸಿದ ಎಫ್‌ಎಸ್‌ಎಲ್ ತಜ್ಞರು ವರದಿಯನ್ನು ಮೊದಲೇ ಕಳುಹಿಸಬಹುದು. ಆದರೆ ಇದು ಒಂದು ವಾರಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.









































