ಹೆಬ್ರಿಯ ಉಷಾ ಮೆಡಿಕಲ್ನಲ್ಲಿ ನಡೆಯುತ್ತಿರುವ ದೇಶಭಕ್ತಿಯ ಕಾರ್ಯಕ್ರಮ
ಹೆಬ್ರಿ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹೆಬ್ರಾಯ್ ಅಧ್ಯಕ್ಷ ದಿನಕರ್ ಪ್ರಭು ಅವರ ನೇತೃತ್ವದಲ್ಲಿ ಹೆಬ್ರಿಯ ಉಷಾ ಮೆಡಿಕಲ್ನಲ್ಲಿ ನಡೆಯುತ್ತಿರುವ ಹರ್ದಿನ್ ಜನಗಣಮನ ಕಾರ್ಯಕ್ರಮದ 35೦ನೇ ದಿನದ ರಾಷ್ಟ್ರಗೀತೆ ಗಾಯನ ಜು. 30ರಂದು ಹೆಬ್ರಿ ಚಾರ ಜವಾಹರ ನವೋದಯ ವಿದ್ಯಾಲಯದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿರುವ ಅವರ ಕಚೇರಿಯಲ್ಲಿ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವೆ, ರಾಷ್ಟ್ರದ ಬಗ್ಗೆ ಇರುವ ಪ್ರೀತಿ, ಗೌರವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಂದು ವರ್ಷ ಕಾರ್ಯಕ್ರಮ ಆಯೋಜನೆ ಸುಲಭದ ಮಾತಲ್ಲ. ದೇಶವೇ ಗಮನಿಸುವಂಥ ಕೆಲಸವನ್ನು ದಿನಕರ್ ಪ್ರಭು ಮಾಡಿದ್ದಾರೆ ಎಂದ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಇದೇ ಸಂದರ್ಭ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರಿಗೂ ಮನವಿ ಸಲ್ಲಿಸಿ ಆಮಂತ್ರಿಸಲಾಯಿತು. ಕಾರ್ಯಕ್ರಮದ ರೂವಾರಿ ದಿನಕರ್ ಪ್ರಭು, ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ , ಹೆಬ್ರಾಯ್ ಉಪಾಧ್ಯಕ್ಷ ಟಿ. ಜಿ. ಆಚಾರ್ಯ, ಚಾರ ನವೋದಯ ವಿದ್ಯಾಲಯದ ಪಿಟಿಸಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಸಂದೇಶ ಶಿವಪುರ ಮೊದಲಾದವರು ಉಪಸ್ಥಿತರಿದ್ದರು.













































