ಗೋಪಾಲ ಭಂಡಾರಿಯವರ 4ನೇ ಪುಣ್ಯಸ್ಮರಣೆ

ಓರ್ವ ಮಾದರಿ ರಾಜಕಾರಣಿ – ರಮಾನಾಥ ರೈ

ಕಾರ್ಕಳ : ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರು ಓರ್ವ ಮಾದರಿ ಜನಪ್ರತಿನಿಧಿಯಾಗಿದ್ದರು. ಅವರ ಸರಳತೆ, ಪ್ರಾಮಾಣಿಕತೆ, ಬದುಕು ಜನಮಾನಸದಲ್ಲಿ ಅಚ್ಚಲಿಯದ ನೆನಪು ಎಂದು ಮಾಜಿ ಮಂತ್ರಿ ಬಿ. ರಮಾನಾಥ ರೈ ಹೇಳಿದರು.

ಅವರು ಜು. 4ರಂದು ಗೋಪಾಲ ಭಂಡಾರಿ ಅವರ ನಾಲ್ಕನೇ ಪುಣ್ಯಸ್ಮರಣೆ ಅಂಗವಾಗಿ ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘ ಪೆರ್ವಾಜೆಯಲ್ಲಿ ನಡೆದ ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಬೆಳೆದಿರುವ ಭಂಡಾರಿಯವರು ಕಾರ್ಕಳ ಕಾಂಗ್ರೆಸ್‌ಗೆ ಅಪಾರ ಕೊಡುಗೆ ನೀಡಿದವರು. ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನರ ಬಗ್ಗೆ ವಿಶೇಷ ಕಾಳಜಿ ವಹಿಸಿದವರು ಎಂದು ರಮಾನಾಥ ರೈ ಬಣ್ಣಿಸಿದರು.

ಅಜಾತಶತ್ರು – ವಿನಯ ಕುಮಾರ್‌
ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಅಜಾತ ಶತ್ರು ಗೋಪಾಲ ಭಂಡಾರಿಯವರು ಸಮಾಜವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ದವರು. ಅವರ ವ್ಯಕ್ತಿತ್ವ, ಗುಣ‌‌‌ನಡತೆ ಎಲ್ಲರಿಗೂ ಮಾದರಿ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಉದಯ ಶೆಟ್ಟಿ ಅವರು ಎದುರಾಳಿಗೆ ತೀವ್ರ ಪೈಪೋಟಿ ನೀಡಿ ಭರವಸೆ ಮೂಡಿಸಿದ್ದಾರೆ. ಮೊಯ್ಲಿ, ಭಂಡಾರಿ ಅವರ ತತ್ವಾದರ್ಶ ಪಾಲನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಕಾರ್ಕಳ ಕಾಂಗ್ರೆಸ್‌ ಶಕ್ತಿಯುತವಾಗಲಿ ಎಂದರು.

ಪ್ರೇರಣಾದಾಯಕ
ಭಂಡಾರಿ ಅವರು ತಾಲೂಕು ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪರಿಷತ್ ಸದಸ್ಯರಾಗಿ ಮಾಡಿದ ಕೆಲಸ ಪ್ರೇರಣಾದಾಯಕ ಎಂದು ಸೊರಕೆ ಅಭಿಪ್ರಾಯಪಟ್ಟರು.

ದಾರಿಯಲ್ಲಿ ಮುನ್ನಡೆಯುವೆವು
ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಭಂಡಾರಿಯವರ ಆದರ್ಶ ಜೀವನ, ಸಾಮಾಜಿಕ ಕಾಳಜಿ, ಬದ್ಧತೆ ನೋಡಿಕೊಂಡು ಬೆಳೆದವರು ನಾವು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ದಿ. ಗೋಪಾಲ ಭಂಡಾರಿ ಅವರು ತೋರಿದ ದಾರಿಯಲ್ಲಿ ನಾವು ಮುಂದುವರಿಯಲಿದ್ದೇವೆ ಎಂದು ತಿಳಿಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಡಿ.ಆರ್.‌ ರಾಜು ಮಾತನಾಡಿ, ಹೆಬ್ರಿ ತಾಲೂಕು ರಚನೆ ಸೇರಿದಂತೆ ಗೋಪಾಲ ಭಂಡಾರಿ ಅವರ ಕೊಡುಗೆ ಅಪಾರ. ನಾಲ್ಕು ವರ್ಷಗಳ ಹಿಂದೆ ಶ್ರೇಷ್ಠ ರಾಜಕಾರಣಿ, ಧೀಮಂತ ನಾಯಕರಾಗಿದ್ದ ಗೋಪಾಲ ಭಂಡಾರಿ ಅವರನ್ನು ಈ ನಾಡು ಕಳೆದುಕೊಂಡಿದೆ ಎಂದರು. ಕಾಂಗ್ರೆಸ್‌ ಜಿಲ್ಲಾ ವಕ್ತಾರ ಬಿಪಿನ್‌ಚಂದ್ರ ಪಾಲ್‌ ನುಡಿನಮನ ಸಲ್ಲಿಸಿದರು. ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅ‍ಧ್ಯಕ್ಷ ಸದಾಶಿವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಬಾಯಾರಿ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಡಿಸೋಜಾ, ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಕಾಂತಿ ಶೆಟ್ಟಿ, ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಿರಣ್ ಹೆಗ್ಡೆ, ಪಕ್ಷದ ಪ್ರಮುಖರಾದ ಮಾಲಿನಿ ರೈ, ಸುಧಾಕರ್ ಕೋಟ್ಯಾನ್, ಮಂಜುನಾಥ್ ಶೆಟ್ಟಿ, ಜಿಲ್ಲಾ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ವೀಣಾ, ಯೆನಪೋಯಾ ಮೆಡಿಕಲ್ ಕಾಲೇಜಿನ ಅಬ್ದುಲ್ ರಜಾಕ್, ಬಂಟ್ವಾಳ ವರ್ಧಮಾನ ಆಸ್ಪತ್ರೆಯ ರಾಜೇಂದ್ರ ಜೈನ್, ನಗರ ಕಾಂಗ್ರೆಸ್‌ ಅಧ್ಯಕ್ಷ ಮಧುರಾಜ್‌ ಶೆಟ್ಟಿ, ಬ್ಲಾಕ್‌ ಐಟಿ ಸೆಲ್‌ ಅಧ್ಯಕ್ಷ ರಾಜೇಂದ್ರ, ಗೋಪಾಲ ಭಂಡಾರಿಯವರ ಪುತ್ರಿ ದೀಪಾ ಭಂಡಾರಿ, ಮಗ ರಾಜೇಸ್‌ ಭಂಡಾರಿ, ಅಳಿಯ ಶ್ವೇತ ಕುಮಾರ್‌ ಹಾಗೂ ಕಾರ್ಕಳ ಪುರಸಭಾ ಹಾಲಿ, ಮಾಜಿ ಸದಸ್ಯರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಜಿತ್ ಹೆಗ್ಡೆ ವಂದಿಸಿದರು.

ಕಣ್ಣಿನ ತಪಾಸಣೆಯಲ್ಲಿ ಭಾಗಿಯಾಗಿದ್ದ 281 ಮಂದಿಗೆ ಇದೇ ಸಂದರ್ಭ ಕನ್ನಡಕ ವಿತರಣೆ ಮಾಡಲಾಯಿತು. 72 ಮಂದಿ ರಕ್ತದಾನ ಮಾಡಿದರು.





























































































































error: Content is protected !!
Scroll to Top