ಚರ್ಚೆಗೆ ಗ್ರಾಸವಾಯಿತು ಶಿಕ್ಷಣ ಇಲಾಖೆ ಸುತ್ತೋಲೆ
ಕಾರ್ಕಳ : ಕೊರೋನಾ ಅನಂತರದಲ್ಲಿ ಶಾಲೆಗಳು ಮತ್ತೆ ತನ್ನ ಎಂದಿನ ಸ್ಥಿತಿಗೆ ಮರಳುತ್ತಿದೆ ಅನ್ನುವ ಧನಾತ್ಮಕ ಲಕ್ಷಣಗಳ ನಡುವೆ ಈ ವರ್ಷ ಪ್ರತಿಭಾ ಕಾರಂಜಿಯೂ ದೊಡ್ಡ ಮಟ್ಟದಲ್ಲಿ ನಡೆಸಲು ಸಿದ್ಧತೆಗಳಾಗುತ್ತಿದೆ. ಶಿಕ್ಷಣ ಇಲಾಖೆಯು ಜೂ. 19ರಂದು ಸುತ್ತೋಲೆ ಹೊರಡಿಸಿ ಈ ವರ್ಷದ ಪ್ರತಿಭಾ ಕಾರಂಜಿಯ ದಿನಾಂಕವನ್ನು ಘೋಷಣೆ ಮಾಡಿದೆ. ಜುಲೈ ತಿಂಗಳಲ್ಲಿ ಶಾಲಾ ಮಟ್ಟ, ಆಗಸ್ಟ್ ತಿಂಗಳಲ್ಲಿ ಕ್ಲಸ್ಟರ್ ಮಟ್ಟ, ಮುಂದೆ ಜಿಲ್ಲಾ ಮಟ್ಟ ಹಾಗೂ
ರಾಜ್ಯಮಟ್ಟದಲ್ಲಿಯೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಇದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಒಂದು ಉತ್ತಮ ವೇದಿಕೆಯಾಗಿದೆ.
ಆದರೆ, ಸುತ್ತೋಲೆಯಲ್ಲಿ ಜಾನಪದ ನೃತ್ಯ ವಿಭಾಗದಲ್ಲಿ ಭೂತದ ಕೋಲಕ್ಕೆ ಅವಕಾಶ ನೀಡಿರುವುದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ನಿಚ್ಚಳವಾಗಿ ಕಂಡುಬರುತ್ತಿದೆ. ಜಾನಪದ ನೃತ್ಯವು ಸಮೂಹ ವಿಭಾಗವಾಗಿದ್ದು ಅದರಲ್ಲಿ ಬುಡಕಟ್ಟು, ಜಾನಪದ, ಪಾರಂಪರಿಕ ಕಲೆಗಳನ್ನು ಪ್ರದರ್ಶಿಸಬೇಕು ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ. ಅಷ್ಟೇ ಹೇಳಿ ಮುಗಿಸಿದ್ದರೆ ವಿವಾದ ಆಗುತ್ತಿರಲಿಲ್ಲ. ಆದರೆ ಅದೇ ಸುತ್ತೋಲೆಯಲ್ಲಿ ಗೊರವರ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ ಇತ್ಯಾದಿ ಉದಾಹರಣೆಗಳನ್ನು ನೀಡಲಾಗಿದೆ. ಕೊನೆಯಲ್ಲಿ ಭೂತದ ಕೋಲ (ಭೂತದ ಕೋಲು ಎಂದು ಆದೇಶದಲ್ಲಿದೆ ? ) ಕ್ಕೆ ಈ ಬಾರಿ ಅನುಮತಿ ನೀಡಲಾಗಿದೆ ಎಂಬ ಉಲ್ಲೇಖ ಇದೆ. ಇದು ತುಳುನಾಡಿನ ಜನರ ನಂಬಿಕೆಗಳಿಗೆ ನೋವು ಉಂಟುಮಾಡುವ ಸಂಗತಿಯಾಗಿದೆ.

ಪ್ರದರ್ಶನ ಕಲೆಯಲ್ಲ
ಭೂತದ ಕೋಲ (ಅಥವಾ ದೈವದ ಕೋಲ) ಅದು ಪ್ರದರ್ಶನ ಕಲೆಯಲ್ಲ. ಅದು ಆರಾಧನಾ ಪದ್ಧತಿ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಪದ್ಧತಿ ಜನರ ನಂಬಿಕೆಯ ಭಾಗವಾಗಿ ಬೆಳೆದು ಬಂದಿದೆ. ಅದನ್ನು ಪೋಷಣೆ ಮಾಡುವ ಪಾಡ್ದನಗಳು, ನುಡಿಗಳು, ವೇಷಭೂಷಣ, ಮುಖವರ್ಣಿಕೆ, ದೈವಗಳು ನೀಡುವ ಇಂಬು ಮತ್ತು ಪ್ರಸಾದ ಎಲ್ಲವೂ ಆರಾಧನಾ ಕಲೆಯ ಭಾಗವಾಗಿಯೇ ಇದೆ. ಅದರ ಬಗ್ಗೆ ಸಂಶೋಧನೆ ಮಾಡಿದ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್, ಡಾಕ್ಟರ್ ಲಕ್ಷ್ಮಿಪ್ರಸಾದ್ ಮೊದಲಾದವರು ಸಾವಿರಾರು ದೈವಗಳ ಐತಿಹ್ಯ, ಕಥೆ ಮತ್ತು ನಂಬಿಕೆಗಳನ್ನು ತಮ್ಮ ಪುಸ್ತಕಗಳಲ್ಲಿ ಉಲ್ಲೇಖ ಮಾಡಿರುತ್ತಾರೆ.
ಕರಾವಳಿ ಕರ್ನಾಟಕದ ಮಂದಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಜನರು (ವಿಶೇಷವಾಗಿ ತುಳುವರು) ಈ ದೈವವನ್ನು ಶತಮಾನಗಳಿಂದ ನಂಬಿಕೊಂಡು ಬಂದಿದ್ದಾರೆ ಮಾತ್ರವಲ್ಲ ಅದರ ಬಗ್ಗೆ ವಿಶೇಷವಾದ ಭಯ – ಭಕ್ತಿ ಹೊಂದಿದ್ದಾರೆ. ತುಳುವರು ತಮ್ಮ ನೆಲವನ್ನು ಬಿಟ್ಟು ಎಲ್ಲಿ ಹೋದರೂ ಈ ದೈವಗಳ ನಂಬಿಕೆಯನ್ನು ಬಿಟ್ಟಿಲ್ಲ ಮತ್ತು ತಮ್ಮ ಊರಲ್ಲಿ ಅಥವಾ ಮನೆಯಂಗಳದಲ್ಲಿ ನಡೆಯುವ ದೈವದ ತಂಬಿಲ, ನೇಮ, ಕೋಲಗಳಲ್ಲಿ ಭಾಗವಹಿಸಿಕೊಂಡು ಬಂದಿದ್ದಾರೆ. ಕೇರಳ ರಾಜ್ಯದಲ್ಲಿ ಕೂಡ ದೈವಾರಾಧನೆಯು ದೊಡ್ಡ ಇತಿಹಾಸ ಮತ್ತು ಹಿನ್ನೆಲೆಯನ್ನು ಹೊಂದಿದೆ.
ಪ್ರತಿಭಟನೆ ನಡೆದಿದೆ
ಈ ಆಧುನಿಕ ಕಾಲದಲ್ಲಿ ಕೂಡ ಈ ನಂಬಿಕೆ ಮತ್ತು ಭಕ್ತಿ ಒಂದಿಷ್ಟೂ ಕಡಿಮೆ ಆಗಿಲ್ಲ ಅನ್ನುವುದು ಆರಾಧನಾ ಕಲೆಯ ಶ್ರೇಷ್ಠತೆಯ ಹೆಗ್ಗುರುತು. ದೈವಗಳು ಅವುಗಳ ಕಳದಲ್ಲಿ ಇದ್ದರೆ ಒಳ್ಳೆಯದು, ಅವುಗಳು ಬೀದಿಗೆ, ಸಾರ್ವಜನಿಕ ವೇದಿಕೆಗೆ, ಸ್ಪರ್ಧೆಗಳಿಗೆ ಬೇಡ ಅನ್ನುವ ಅಭಿಪ್ರಾಯ ಅನೇಕ ವಿದ್ವಾಂಸರು, ಪಂಡಿತರದ್ದು. ದೈವದ ವೇಷಧಾರಿಗಳು ವಿವಿಧ ಶೋಭಾಯಾತ್ರೆಗಳಿಗೆ ಬಂದಾಗ, ಶಾಲಾ ವಾರ್ಷಿಕೋತ್ಸವದ ವೇದಿಕೆ ಏರಿದಾಗ, ನಾಟಕಗಳಲ್ಲಿ ಕಾಣಿಸಿಕೊಂಡಾಗ ಈ ಹಿಂದೆ ಅನೇಕ ಪ್ರತಿಭಟನೆಗಳೂ ನಡೆದಿವೆ.
‘ಕಾಂತಾರ’ ಸಿನಿಮಾದಲ್ಲಿ ದೈವಾರಾಧನೆ ದೊಡ್ಡ ಮಟ್ಟದಲ್ಲಿ ಕ್ಯಾನ್ವಾಸ್ ಆದಾಗ ಸಿನೆಮಾ ನೋಡಿ ಹೊಗಳಿ
ಮೆಚ್ಚಿಕೊಂಡವರು ಅಸಂಖ್ಯರು. ಆದರೆ ಅಂದು ಸಿನಿಮಾವನ್ನು ವಿರೋಧ ಮಾಡಿದವರೂ ಇದ್ದಾರೆ. ಇನ್ನು ಶಾಲೆಯ ಮಕ್ಕಳು ತಪ್ಪು ತಪ್ಪಾಗಿ ಅದನ್ನು ಪ್ರದರ್ಶನ ಮಾಡಲು ಹೊರಟರೆ ಇನ್ನಷ್ಟು ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ. ಇದು ಮಡಿ, ಮೈಲಿಗೆ ಇರುವ ಪಾವಿತ್ರ್ಯದ ಆರಾಧನೆ. ದೈವದ ನುಡಿ, ನರ್ತನ, ಆವೇಶ, ಗಗ್ಗರದ ಧ್ವನಿ, ದೈವದ ನುಡಿ, ದೈವದ ವೇಷಭೂಷಣ ಇದರಲ್ಲಿ ಒಂದು ಸಣ್ಣ ತಪ್ಪಾದರೂ ತುಳುನಾಡಿನ ಜನ ಕ್ಷಮಿಸಲಾರರು.
ಅದರಲ್ಲಿಯೂ ಈ ಕಲೆಯನ್ನು ಪೋಷಣೆ ಮಾಡಿಕೊಂಡು ಬಂದಿರುವ ದೈವ ನರ್ತಕರು ಇದನ್ನು ಖಂಡಿತವಾಗಿ ಬೆಂಬಲಿಸುವುದಿಲ್ಲ. ಆದ್ದರಿಂದ ವಿವಾದದ ಕಿಡಿ ಹೊತ್ತಿ ಉರಿಯುವ ಮೊದಲು ಶಿಕ್ಷಣ ಇಲಾಖೆಯು ತನ್ನ ವಿವೇಚನೆಯನ್ನು ಉಪಯೋಗ ಮಾಡಿಕೊಂಡು ಈ ದೈವದ ಕೋಲಕ್ಕೆ ಪ್ರತಿಭಾ ಕಾರಂಜಿಯ ವೇದಿಕೆಯಲ್ಲಿ ನೀಡಿದ ಅನುಮತಿಯನ್ನು ಹಿಂದೆ ಪಡೆಯುವುದು ಹೆಚ್ಚು ಸೂಕ್ತ.
ದೈವಾರಾಧನೆಯನ್ನು ಸರಕಾರ ಮನರಂಜನೆ ಮಟ್ಟಕ್ಕೆ ಇಳಿಸಿರುವುದು ದುರದೃಷ್ಟಕರ. ಹಿಂದೆ ದೈವಾರಾಧನೆಗೆ ಅಪಚಾರ ಆದಾಗ ಪ್ರಬಲ ಪ್ರತಿಭಟನೆ ವ್ಯಕ್ತವಾಗಿರುವುದನ್ನು ತಿಳಿದು ಕೂಡ ಇಂಥ ಆದೇಶ ನೀಡಿರುವುದರ ಹಿಂದೆ ಹಿಂದುಗಳ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುವ ಉದ್ದೇಶವಿದೆ. ದೈವಾರಾಧಕರು ಸಹಿಸಲಾರೆವು. ಶಿಕ್ಷಣ ಇಲಾಖೆ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು.
ವಿ. ಸುನಿಲ್ ಕುಮಾರ್
ಕಾರ್ಕಳ ಶಾಸಕರು, ಮಾಜಿ ಸಚಿವರು
ನಮ್ಮ ಹಿರಿಯರು ನಂಬಿಕೊಂಡು ಬಂದಿರುವ ಸತ್ಯ ವೇದಿಕೆಯಲ್ಲಿ ಪ್ರದರ್ಶನ ಮಾಡುವ ಸಂಗತಿಯಲ್ಲ. ಪ್ರತಿಭಾ ಕಾರಂಜಿಯಲ್ಲಿ ದೈವಕೋಲಕ್ಕೆ ಅವಕಾಶ ನೀಡಿದಲ್ಲಿ ತುಳುನಾಡಿನ ನಂಬಿಕೆಗೆ ಧಕ್ಕೆಯಾಗುವುದು. ನಂಬಿಕೆಯ ಅಪಹಾಸ್ಯವಾಗುವುದು. ಸಿನಿಮಾದಿಂದ ದೈವದ ಬಗ್ಗೆ ಭಕ್ತಿ ಬಂದಿದಲ್ಲ. ನಮ್ಮ ಹಿರಿಯರಿಂದ ನಂಬಿಕೊಂಡು ಬಂದಿರುವ ಆರಾಧನೆ.
ನವೀನ್ ಇನ್ನಾ
ಪತ್ರಕರ್ತರು, ಮುಂಬೈ
ಸತ್ಯದ ವಿಚಾರ ಬೀದಿಗೆ ಬಂದು ನಮ್ಮ ಧಾರ್ಮಿಕ ನಂಬಿಕೆಗೆ ತೊಂದರೆಯಾಗಬಾರದು. ಶಿಕ್ಷಣ ಇಲಾಖೆಯ ಈ ಧೋರಣೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಸಂಜೀವ ಪರವ, ದೈವನರ್ತಕರು






























































