ಸ್ವಚ್ಛ ಕಾರ್ಕಳಕ್ಕೆ ಕೊಳಕು ಮೆತ್ತುವ ಪ್ರಯತ್ನ ಮಾಡಬೇಡಿ
ಕಾರ್ಕಳ : ಕಳೆದ 5 ವರ್ಷದಲ್ಲಿ ಜನರ ಬಳಿಯೇ ಹೋಗದ ಕಾರ್ಕಳ ಕಾಂಗ್ರೆಸ್ ಇದೀಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾರಣ ದಿಢೀರ್ ಆಗಿ ಜನತೆ ಮೇಲೆ ಪ್ರೀತಿ ತೋರಿಸುತ್ತಿದೆ. ಹೀಗಾಗಿ ಕಂಡ ಕಂಡ ಕಡೆಯಲ್ಲೆಲ್ಲ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನಕ್ಕೆ ಕೈ ಹಾಕಿದೆ. ಅಲ್ಲಿ ಇಲ್ಲಿ ಹೋಗಿ ಪರಿಶೀಲನೆ ಮಾಡುವ ನೆಪದಲ್ಲಿ ಪುಕ್ಸಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ ಎಂದು ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುಹಾಸ್ ಶೆಟ್ಟಿ ವ್ಯಂಗ್ಯವಾಡಿದರು.
ಕಾಂಗ್ರೆಸಿನವರಿಗೆ ನಿಜವಾಗಿ ಪರಿಶೀಲನೆಯ ಆಸಕ್ತಿ ಇದ್ದರೆ ಮೊದಲು ಕಾಡುಹೊಳೆ-ಅಂಡಾರು ರಸ್ತೆಯನ್ನು ಪರಿಶೀಲಿಸಿ ಎಂದು ಲೇವಡಿ ಮಾಡಿದರು. ಕಾರ್ಕಳದಲ್ಲಿ ಕಳೆದ 10 ವರ್ಷಗಳಿಂದ ಶಾಸಕ ಸುನಿಲ್ ಕುಮಾರ್ ಅವರು ನಿರಂತರವಾಗಿ ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದರೆ, ಒಂದು ದಿನ ಕೂಡ ಸ್ವಚ್ಛತೆ ಅಭಿಯಾನದಲ್ಲಿ ಕಾಂಗ್ರೆಸಿಗರು ಭಾಗಿಯಾದ ಉದಾಹರಣೆ ಇಲ್ಲ. ಅವರಿಗೆ ಸಾಧ್ಯವಾದರೆ ಸ್ವಚ್ಛ ಕಾರ್ಕಳ-ಸ್ವರ್ಣ ಕಾರ್ಕಳದ ಅಭಿವೃದ್ಧಿಗೆ ಸಹಕರಿಸಲಿ. ಅದು ಬಿಟ್ಟು ಸ್ವಚ್ಛವಾಗಿರುವ ರಾಜಕಾರಣಕ್ಕೆ ಕೊಳಕು ಮೆತ್ತುವ ಕೀಳು ಪ್ರಯತ್ನ ಮಾಡಬೇಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




































