ವಿಪಕ್ಷದ ಅಭ್ಯರ್ಥಿಗಳಿಲ್ಲದಿರುವುದರಿಂದ ಆಯ್ಕೆ ಸಲೀಸು
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿ ಹುಬ್ಬಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಬೋಸರಾಜು ಹಾಗೂ ತಿಪ್ಪಣ್ಣ ಕಮಕನೂರು ಅವರು ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಧಾನ ಪರಿಷತ್ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್, ತಿಪ್ಪಣ್ಣ ಕಮಕನೂರು ಹಾಗೂ ಸಚಿವ ಬೋಸರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ಅವರು ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ.
ಲಕ್ಷ್ಮಣ ಸವದಿ, ಆರ್.ಶಂಕರ್ ಹಾಗೂ ಬಾಬುರಾವ್ ಚಿಂಚನಸೂರ್ ಅವರ ರಾಜೀನಾಮೆಯಿಂದ ತೆರವಾದ ಈ ಮೂರು ಸ್ಥಾನಗಳಿಗೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿತ್ತು.
ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯಬೇಕಿದ್ದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 20 ಮತ್ತು ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿತ್ತು. ಕಣದಲ್ಲಿ ಮೂವರೇ ಇದ್ದ ಕಾರಣದಿಂದ ಈ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ.





































