ಹೆಚ್ಚಿನ ರಿಫ್ಲೆಕ್ಟರ್- ತಿರುವಿನಲ್ಲಿ ಫಲಕ- ಕ್ಯಾಟ್ ಐ ಅಳವಡಿಕೆಗೆ ಕ್ರಮ
ಕಾರ್ಕಳ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಆಗುಂಬೆ ಘಾಟಿ ಹಾಗೂ ಇತರ ಪ್ರದೇಶದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆದ ಅಪಘಾತಗಳಿಂದ ಜೀವಹಾನಿಯಾಗಿದ್ದು, ಈ ನಿಟ್ಟಿನಲ್ಲಿ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಯಾವ ರೀತಿಯಲ್ಲಿ ಜಾಗೃತಿ ಮೂಡಿಸಬಹುದು ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಉಡುಪಿ ಜಿಲ್ಲಾ ಪೊಲೀಸ್, ಹೆಬ್ರಿ ಪೊಲೀಸ್ ಠಾಣೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ಜೂ. 22 ರಂದು ಅಪಘಾತ ತಡೆ ಕುರಿತು ಕಾರ್ಯಕ್ರಮ ಜರುಗಿತು.
ಕಾರ್ಕಳ ಡಿವೈಎಸ್ಪಿ, ಸಿಪಿಐ, ಹೆಬ್ರಿ ಪಿಎಸ್ಐ, ಆರ್ಟಿಒ ಹಾಗೂ ಹೆದ್ದಾರಿ ಅಧಿಕಾರಿಗಳು ಅಪಘಾತ ಸ್ಥಳಗಳನ್ನು ಪರಿಶೀಲನೆ ನಡೆಸಿ ರಸ್ತೆಯಲ್ಲಿ ಹೆಚ್ಚಿನ ರಿಫ್ಲೆಕ್ಟರ್ ಅಳವಡಿಕೆ, ರಸ್ತೆ ತಿರುವುಗಳಲ್ಲಿ ಎಚ್ಚರಿಕೆ ಫಲಕ, ಕ್ಯಾಟ್ ಐ ಅಳವಡಿಕೆ, ರಸ್ತೆ ತಿರುವುಗಳಲ್ಲಿರುವ ಮರದ ಗೆಲ್ಲುಗಳನ್ನು ಕಡಿಯುವಂತೆ, ವಾಹನಗಳ ವೇಗವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ತಿರುವುಗಳಲ್ಲಿ ರಿಬ್ಲಿಂಗ್ಸ್ ಅಳವಡಿಕೆ, ತಿರುವುಗಳಿಂದ ಕೂಡಿರುವ ರಸ್ತೆಯ ಎರಡು ಬದಿಗಳಲ್ಲಿ ಬಿಳಿಯ ಪಟ್ಟಿ ಅಳವಡಿಕೆ, ಅಫಘಾತ ವಲಯ ಎಚ್ಚರಿಕೆ ಸೈನ್ ಬೋರ್ಡ್ ಅಳವಡಿಕೆ ಹಾಗೂ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಶನಿವಾರ ಮತ್ತು ಭಾನುವಾರ ಸೋಮೇಶ್ವರ ಪೇಟೆ ಮತ್ತು ಘಾಟಿ ಆರಂಭವಾಗುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ವೇಳೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಸಿಪಿಐ ಟಿಡಿ ನಾಗರಾಜ್, ಹೆಬ್ರಿ ಪಿಎಸ್ಐ ಸುದರ್ಶನ ದೊಡ್ಡಮನಿ, ಆರ್ ಟಿ ಒ ಅಧಿಕಾರಿ ಸಂತೋಷ್ ಶೆಟ್ಟಿ, ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ನವೀನ್ ಮತ್ತು ಶಶಿಧರ್ ಉಪಸ್ಥಿತರಿದ್ದರು.









































