ಕಾರ್ಕಳ : 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಶಾಲಾ ಕಾಲೇಜುಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಜೂ. 21 ರಂದು ಯೋಗ ದಿನಾಚರಣೆ ನಡೆಯಿತು.
ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಯೋಗಪಟು ಅಶೋಕ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ವಿವಿಧ ಆಸನಗಳನ್ನು ಪರಿಚಯಿಸಿ ಯೋಗದ ಮಹತ್ವ ಮತ್ತು ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಹಿರಿಯ ಸಹ ಶಿಕ್ಷಕ ಯೋಗೇಂದ್ರ ನಾಯಕ್, ದೈಹಿಕ ಶಿಕ್ಷಣ ಶಿಕ್ಷಕಿ ಪ್ರಿಯಾ ಪ್ರಭು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಹೆಬ್ರಿಯ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ದೈಹಿಕ ಶಿಕ್ಷಕ ಮಧುಶೇಖರ್ ಅವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಆಡಳಿತಾಧಿಕಾರಿ ಹೆರಾಲ್ಡ್ ಲೂಯಿಸ್, ಎಸ್.ಆರ್. ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಭಗವತಿ, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಾಲ ಆಚಾರ್ಯ, ಶಿಕ್ಷಕರಾದ ಅಕ್ಷತಾ, ಅಕ್ಷಿತಾ, ಸಂಗೀತಾ, ಶಾರದಾ, ಸುಕೇಶ್, ಜಗನ್ನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಾರ್ಕಳ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗಾಭ್ಯಾಸದೊಂದಿಗೆ ಯೋಗ ದಿನವನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಪ್ರತಿಮಾ ಎಸ್. ಅವರು ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಕುರಿತು ಮಾಹಿತಿ ನೀಡಿದರು. ಶಿಕ್ಷಕಿಯರಾದ ಮಧುಶ್ರೀ, ಶ್ರೇಯಾ, ಅಶ್ವಿನಿ ಹಾಗೂ ವಿನುತಾ ಉಪಸ್ಥಿತರಿದ್ದರು.ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಯೋಗ ಶಿಕ್ಷಕಿ ವಿನಯ ರಾನಡೆ ಅವರು ಆರೋಗ್ಯ ಕಾಪಾಡುವಲ್ಲಿ ಯೋಗದ ಮಹತ್ವತೆ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಯೋಗದ ವಿವಿಧ ಆಸನಗಳನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶನ ನೀಡಿದರು. ಶಿಕ್ಷಕಿ ಉಷಾ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಕಳ ತಾಲೂಕು ಕಚೇರಿ ಬಳಿಯಿರುವ ಶ್ರೀ ರಾಮ ಯೋಗ ಕೇಂದ್ರದಲ್ಲಿ ಯೋಗ ದಿನಾಚರಣೆ ಜರುಗಿತು.
ಕಾರ್ಕಳ ಶ್ರೀ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕ್ರೀಡಾ ಭಾರತಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಹರೀಶ್ ಕುಮಾರ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಯೋಗ ಸಂಕಲ್ಪ ಬೋಧಿಸಿದರು. ಕ್ರೀಡಾ ಭಾರತಿಯ ವಿಭಾಗ ಸಂಯೋಜಕ ಪ್ರಸನ್ನ ಅವರು “ಬಾಲೋಪಚಾರ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಎಂಬ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಈ ಸಂದರ್ಭ ಆನಂದ ಭಟ್ ಕಾರ್ಕಳ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕು. ಹರಿಣಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಸುಧಾಕರ ಅವರು ಕಾರ್ಯಕ್ರಮ ನಿರ್ವಹಿಸಿದರು.