ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ

ಸಂತೋಷ್‌ ರಾವ್‌ ನಿರ್ದೋಷಿ – ಸಿಬಿಐ ಕೋರ್ಟ್‌ ತೀರ್ಪು

ಬೆಳ್ತಂಗಡಿ : ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಬಿಐ ಕೋರ್ಟ್‌ ಜೂ. 16 ರಂದು ತೀರ್ಪು ನೀಡಿದ್ದು, ಆರೋಪಿ ಸಂತೋಷ್‌ ರಾವ್‌ರನ್ನು ಖುಲಾಸೆ ಮಾಡಿದೆ. ಅವರ ವಿರುದ್ಧ ಸಲ್ಲಿಕೆ ಮಾಡಲಾಗಿರುವ ಸಾಕ್ಷ್ಯಾಧಾರಗಳಲ್ಲಿ ಕೊರತೆ ಇದೆ ಎನ್ನುವ ಕಾರಣಕ್ಕೆ ಆರೋಪಿಯನ್ನು ದೋಷಮುಕ್ತ ಮಾಡಿರುವುದಾಗಿ ನ್ಯಾಯಮೂರ್ತಿ ಸಿಬಿ ಸಂತೋಷ್‌ ತಿಳಿಸಿದ್ದಾರೆ.

ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಆಗಿದ್ದ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 2012ರ ಅಕ್ಟೋಬರ್‌ 10 ರಂದು ಧರ್ಮಸ್ಥಳದ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ‌ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಈಗ 11 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿದೆ.

ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿ ಪುತ್ರಿ ಸೌಜನ್ಯ ನಿಗೂಢ ಕೊಲೆ ಪ್ರಕರಣದಲ್ಲಿ ಆರೋಪಿಗಳು ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಂತಾಗಿದೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಜನ್ಯ 2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣಸಂಕ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲು ಮಾಡಿತ್ತು. ಶಂಕಿತ ಆರೋಪಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಿವಾಸಿ ಸಂತೋಷ್ ರಾವ್ ಎಂಬಾತನನ್ನು ಬಾಹುಬಲಿ ಬೆಟ್ಟದ ಬಳಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆಗ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ನಂತರದ ಭಾರಿ ಪ್ರತಿಭಟನೆ ನಡೆದು ಪ್ರಕರಣವನ್ನು ಸಿಬಿಐಗೆ ನೀಡಲಾಗಿತ್ತು.

















































error: Content is protected !!
Scroll to Top