ಕಗ್ಗದ ಸಂದೇಶ-ಅಳು, ನಗು ಹೃದಯ ಕವಾಟದ ಬಾಗಿಲುಗಳು…

ಅಳುವೇನು? ನಗುವೇನು? ಹೃತ್ಕಪಾಟೋದ್ಘಾಟ|
ಶಿಲೆಯೆ ನೀಂ ಕರಗದಿರಲು? ಅರಳದಿರೆ ಮರಳೇಂ?||
ಒಳಜಗವ ಹೊರವಡಿಪ, ಹೊರಜಗವನೊಳಕೊಳುವ|
ಸುಳುದಾರಿಯಳುನಗುವು–ಮಂಕುತಿಮ್ಮ||

ಅಳು ಮತ್ತು ನಗು ಹೃದಯದ ಬಾಗಿಲನ್ನು ತೆಗೆದು ಮುಚ್ಚುವ ಸಾಧನಗಳು. ನೀನು ಕರಗದೆ ಇರಲು ಶಿಲೆಯಲ್ಲ. ಅರಳದೆ ಇರಲು ಮರಳು ಅಲ್ಲ. ಒಳಗಿನ ಭಾವನೆಗಳನ್ನು ಹೊರ ಜಗತ್ತಿನೊಂದಿಗೆ ಬೆರೆಸುವ ಮತ್ತು ಹೊರ ಜಗತ್ತಿನ ಆಗುಹೋಗುಗಳನ್ನು ಒಳಗೆ ತಂದುಕೊಂಡು ಅದಕ್ಕೆ ಸ್ವಂದಿಸುವ ಸುಲಭವಾದ ದಾರಿಯೆಂದರೆ ಅಳು ಮತ್ತು ನಗು ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
ಅಳು ಮತ್ತು ನಗು ನಮ್ಮನ್ನು ಹೊರಜಗತ್ತಿನೊಂದಿಗೆ ಜೋಡಿಸುವ ಸೇತುವೆಯಂತೆ. ಅಳು ಮತ್ತು ನಗು ಹೃದಯವೆಂಬ ಕವಾಟಿನ ಬಾಗಿಲುಗಳು. ನಿರಂತರವಾಗಿ ಈ ಬಾಗಿಲುಗಳನ್ನು ತೆರೆಯುತ್ತಾ ಇರಬೇಕು. ಸಂತೋಷ ಮತ್ತು ದುಃಖವನ್ನು ಹಿಡಿದಿಡದೆ ಸಂಕಟವಾದಾಗ ಅಳಬೇಕು ಸಂತೋಷವಾದಾಗ ನಗಬೇಕು. ಅಳು ಮನಸ್ಸನ್ನು ಹಗುರಾಗಿಸಿ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಸಿವಾದಾಗ ಯಾವ ರೀತಿಯಲ್ಲಿ ಊಟವನ್ನು ಮಾಡುತ್ತೇವೆಯೋ ಅಂತೆಯೆ ದುಃಖವಾದಾಗ ಅಳಬೇಕು. ಕೇವಲ ನಮ್ಮ ನೋವಿಗಾಗಿ ಮರುಗದೆ ಅನ್ಯರ ನೋವನ್ನು ಕಂಡು ದುಃಖಿಸುವುದು ಮಾನವೀಯತೆಯ ಧರ್ಮ. ಎಲ್ಲರೊಳಗೆ ಒಂದಾಗಬೇಕಾದರೆ ಇತರರ ನೋವು-ನಲಿವಿನಲ್ಲಿ ಭಾಗೀದಾರರಾಗಬೇಕು

ಹೃದಯದಬ್ಬರವೇನು? ಹೊಟ್ಟೆಯುಬ್ಬರದಂತೆ|
ಅದರಿಳಿತ ಕೊರಳನಾಳದ ಸದ್ದಿನಿಂದ||
ಅದೇ ನಗುವು ದುಗುಡಗಳು ಅದೆ ಹೊಗಳುತೆಗಳುಗಳು|
ಅದನಿಳಿಸೆ ಶಾಂತಿಯಲೊ–ಮರುಳಮುನಿಯ||

ಅಂದರೆ ಹೊಟ್ಟೆಯ ಹಸಿವಿನಂತೆ ಅಳು ಮತ್ತು ನಗು ಹೃದಯದ ತುಡಿತಗಳು. ಕೆಲವರು ಅಳು ಬಂದರೂ ಹೊರಗೆ ತೋರಗೊಡದೆ ಒಳಗೊಳಗೆ ನುಂಗಿಕೊಂಡು ವ್ಯಥೆ ಪಡುತ್ತಾರೆ. ಅಳುವುದು ತಪ್ಪು ಎಂದು ಭಾವಿಸಬಾರದು. ಅಳುವನ್ನು ಹಿಡಿದಿಟ್ಟುಕೊಂಡರೆ ಆರೋಗ್ಯದ ಸಮಸ್ಯೆ ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ. ಮುಕ್ತವಾಗಿ ಅತ್ತು ಮನಸ್ಸಿನ ಭಾರ ಕಡಿಮೆ ಮಾಡಿಕೊಂಡಲೇ ನೆಮ್ಮದಿ ಪ್ರಾಪ್ತವಾಗುವುದು.

ಅಳುವರೊಡನಳುತಳುತೆ ನಗುವರೆಡೆ ನಗುನಗುತೆ|
ಬಲುಹದೋರುವರೊಡನೆ ಬಲುಹನುಬ್ಬಿಸುತೆ||
ಹುಲುಸು ಬೆಳೆ ಬೇಕೆಂಬನಿಗೆ|
ಸಲಿಸವಗವರಿಚ್ಚೆ–ಮರುಳಮುನಿಯ||

ಅಂದರೆ ಅಳುವವರೊಡನೆ ಅಳಬೇಕು; ನಗುವವರೊಡನೆ ನಗಬೇಕು. ನಗು ಆಕರ್ಷಣೆಯ ಆಯಸ್ಕಾಂತ, ಸ್ನೇಹದ ಸೇತು; ಹೊಸ ಸಂಬಂಧವನ್ನು ಹುಡುಕಿ ತರುತ್ತದೆ, ಹಳೆ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ನಗುವಿನಿಂದ ಅಂಗಾಂಗಳಿಗೆ ರಕ್ತದ ಪೂರೈಕೆ ಹೆಚ್ಚಾಗುತ್ತದೆ. ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಆರೋಗ್ಯ ಮತ್ತು ಮನಸ್ಥಿತಿಯು ಸುಧಾರಿಸುತ್ತದೆ. ಇದೇ ರೀತಿಯಲ್ಲಿ ಅಳು ಕೂಡ. ಕಣ್ಣಿನ ರಪ್ಪೆಗಳನ್ನು ಮಿಟುಕಿಸುವುದು ಎಷ್ಡು ಮುಖ್ಯವೋ ಕಣ್ಣೀರು ಹೊರಹೊಗುವುದು ಅಷ್ಟೇ ಮುಖ್ಯ. ಆದರೆ ಕೇವಲ ನಮಗಾಗಿ ಅಳದೇ ನಗದೇ ಇತರಿಗಾಗಿ ನಕ್ಕಾಗ, ಕಣ್ಣೀರು ಹನಿಸಿದಾಗಲೇ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಸಾಪ ಕಾರ್ಕಳ ಘಟಕ ಅಧ್ಯಕ್ಷರು.





























































































































error: Content is protected !!
Scroll to Top