ಪಂಡರಾಪುರ ವಿಠಲನ ಭಕ್ತರ ಮೇಲೆ ಲಾಠಿಚಾರ್ಜ್‌

ಪೊಲೀಸರು-ಭಕ್ತರ ನಡುವೆ ವಾಗ್ವಾದ ಕಾರಣ

ಮುಂಬಯಿ : ಪಂಡರಾಪುರದ ವಿಠ್ಠಲ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಮಹಾರಾಷ್ಟ್ರ ಪೊಲೀಸರು ಭಾನುವಾರ ಪುಣೆ ಜಿಲ್ಲೆಯಲ್ಲಿ ಲಾಠಿ ಚಾರ್ಜ್ ಮಾಡಿರುವುದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ವಾರ್ಕರಿಗಳ ಮೇಲೆ ಪೊಲೀಸರು ಲಾಠಿಚಾರ್ಜ್‌ ಮಾಡಿರುವುದು ಇದೇ ಮೊದಲು. ಮೆರವಣಿಗೆ ವೇಳೆ ಭಕ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಲಾಠಿಚಾರ್ಜ್‌ ಮಾಡಲಾಗಿದೆ.
ಪುಣೆ ನಗರದಿಂದ 22 ಕಿ.ಮೀ ದೂರದಲ್ಲಿರುವ ಅಳಂಡಿ ಪಟ್ಟಣದ ಶ್ರೀ ಕ್ಷೇತ್ರ ಪಂಡರಾಪುರದ ದೇವಸ್ಥಾನಕ್ಕೆ ಸಮಾರಂಭವೊಂದಕ್ಕೆ ಪ್ರವೇಶ ಮಾಡುವ ವೇಳೆ ವಾಗ್ವಾದ ನಡೆದಿದೆ. ಅಪಾರ ಸಂಖ್ಯೆಯ ಭಕ್ತರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಿಯಮದ ಪ್ರಕಾರ 75 ಮಂದಿಗೆ ಮಾತ್ರ ಆವರಣ ಪ್ರವೇಶಿಸಲು ಅವಕಾಶವಿದೆ. ಆದರೆ ಅದರ ಬದಲಾಗಿ ಸುಮಾರು 400 ಮಂದಿ ದೇವಸ್ಥಾನಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಕ್ತರ ಮೇಲಿನ ಲಾಠಿಚಾರ್ಜ್ ಆಗಿರುವ ಆರೋಪವನ್ನು ನಿರಾಕರಿಸಿದ್ದಾರೆ. ಇದನ್ನು ಪೊಲೀಸರು ಮತ್ತು ಭಕ್ತ ನಡುವಿನ ಸಣ್ಣ ಘರ್ಷಣೆ ಎಂದು ಕರೆದಿದ್ದಾರೆ. ವಾರ್ಕರಿ ಸಮುದಾಯದ ಮೇಲೆ ಲಾಠಿಚಾರ್ಜ್ ನಡೆದಿಲ್ಲ ಎಂದು ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ. ಹಿಂದುತ್ವ ಸರ್ಕಾರದ ಆಡಂಬರ ಬಯಲಾಗಿದೆ. ಮುಖವಾಡ ಕಳಚಿಬಿತ್ತು. ಔರಂಗಜೇಬ್ ಇದಕ್ಕಿಂತ ವಿಭಿನ್ನವಾಗಿ ವರ್ತಿಸುತ್ತಿದ್ದರೇ.? ಮಹಾರಾಷ್ಟ್ರದಲ್ಲಿ ಮೊಘಲರು ಪುನರ್ಜನ್ಮ ಪಡೆದಿದ್ದಾರೆ ಎಂದು ಶಿವಸೇನೆಯ ಹಿರಿಯ ಸಂಸದ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.





























































































































error: Content is protected !!
Scroll to Top