ಕರಾವಳಿ ಮಹಿಳೆಯರಿಗೆ ಭಾರಿ ನಿರಾಶೆ
ಮಂಗಳೂರು: ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೆ ವಿಸ್ತರಿಸಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳೇ ಹೆಚ್ಚು ಓಡಾಟ ನಡೆಸುತ್ತಿರುವುದರಿಂದ ಈ ಭಾಗದವರಿಗೆ ಶಕ್ತಿ ಯೋಜನೆಯ ಪ್ರಯೋಜನ ಸಿಗಲು ಖಾಸಗಿ ಬಸ್‌ಗಳಿಗೂ ಯೋಜನೆ ವಿಸ್ತರಿಸಬೇಕೆಂಬ ಆಗ್ರಹವಿತ್ತು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಈ ಕುರಿತು ಮೊದಲು ಬೇಡಿಕೆ ಇಟ್ಟಿದ್ದರು.
ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡಲು ಮಂಗಳೂರಿಗೆ ಬಂದಿ ವೇಳೆ ದಿನೇಶ್ ಗುಂಡೂರಾವ್ ಶಕ್ತಿ ಯೋಜನೆಯನ್ನು ಸರ್ಕಾರಿ ಬಸ್‌ಗಳಿಗೆ ಮಾತ್ರ ಸಿಮೀತಗೊಳಿಸಲಾಗಿದ್ದು, ಖಾಸಗಿ ಬಸ್‌ಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳದ್ದೇ ಪ್ರಾಬಲ್ಯವಿದ್ದು, ಮಂಗಳೂರಿಗೆ ಮಾತ್ರ ಖಾಸಗಿ ಬಸ್ಗೆ ಫ್ರೀ ಕೊಡುವುದಕ್ಕೆ ಆಗುವುದಿಲ್ಲ. ಈ ಯೋಜನೆಯನ್ನು ವಿಸ್ತರಣೆ ಮಾಡಿದ್ದಲ್ಲಿ ಇಡೀ ಕರ್ನಾಟಕಕ್ಕೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಆರ್ಎಸ್ಎಸ್ ಗೆ ಭೂಮಿ ನೀಡಿರುವ ಕುರಿತು ತನಿಖೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ಭೂಮಿಯನ್ನು ಸರಿಯಾದ ಉದ್ದೇಶಕ್ಕೆ ನೀಡಬೇಕು. ಅರ್ಹತೆ ಇರುವ ಸಂಘ-ಸಂಸ್ಥೆಗಳು ತೆಗೆದುಕೊಳ್ಳಬೇಕು. ನಾನು ಹೇಳಿರುವ ಹೇಳಿಕೆ ಎಲ್ಲರಿಗೂ ಅನ್ವಯ. ಕೇವಲ ಒಬ್ಬರಿಗೆಂದು ಹೇಳಿರೋದಲ್ಲ. ಸರ್ಕಾರಿ ಭೂಮಿ ಸರಿಯಾಗಿ ಬಳಕೆಯಾಗಬೇಕೆಂಬ ದೃಷ್ಟಿಯಿಂದ ಹೇಳಿದ್ದೇನೆ ಎಂದು ತಿಳಿಸಿದರು.






























































