ಮುಂಬಯಿಯಲ್ಲಿರುವ ಕರಾವಳಿ ಭಾಗದ ಜನರಿಗೆ ಅನುಕೂಲ
ಮಂಗಳೂರು: ಮುಂಬಯಿ-ಮಂಗಳೂರು ನಡುವೆ ಏರ್ ಇಂಡಿಯಾ ಭಾನುವಾರದಿಂದ ಹೆಚ್ಚುವರಿ ವಿಮಾನ ಸಂಚಾರ ಪ್ರಾರಂಭಿಸಿದೆ. ಜೂನ್ 10ರಿಂದ ಪ್ರಾರಂಭವಾಗಿರುವ ಏರ್ ಇಂಡಿಯಾದ ಈ ಎರಡನೇ ವಿಮಾನ ದೈನಂದಿನ ನೆಲೆಯಲ್ಲಿ ಕಾರ್ಯಾಚರಿಸಲಿದೆ.
ಮೇ 22ರಂದು ಇಂಡಿಗೊ ಮುಂಬಯಿ-ಮಂಗಳೂರು ನಡುವೆ ಮೂರನೇ ದೈನಂದಿನ ವಿಮಾನವನ್ನು ಪ್ರಾರಂಭಿಸಿತ್ತು. ಇದೀಗ ಏರ್ ಇಂಡಿಯಾ ಎರಡನೇ ವಿಮಾನ ಪ್ರಾರಂಭಿಸಿದ್ದು, ಇದರೊಂದಿಗೆ ಎರಡು ವಿಮಾನಯಾನ ಸಂಸ್ಥೆಗಳು ಮುಂಬಯಿ-ಮಂಗಳೂರು ನಡುವೆ ಐದು ದೈನಂದಿನ ವಿಮಾನಗಳನ್ನು ನಿರ್ವಹಿಸಿದಂತಾಗುತ್ತದೆ.
ಏರ್ ಇಂಡಿಯಾ ವಿಮಾನ 1679 ಮುಂಬಯಿಯಿಂದ ಮಧ್ಯಾಹ್ನ 12.40ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಮಂಗಳೂರು ತಲುಪಲಿದೆ. ಏರ್ ಇಂಡಿಯಾ 1680 ಮಂಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಸಂಜೆ 4.35ಕ್ಕೆ ಮುಂಬಯಿ ತಲುಪಲಿದೆ. ಮತ್ತೊಂದು ಏರ್ ಇಂಡಿಯಾ ವಿಮಾನ ಏರ್ ಇಂಡಿಯಾ 679 ಮುಂಬಯಿಯಿಂದ ಬೆಳಗ್ಗೆ 5.45ಕ್ಕೆ ಹೊರಟು ಬೆಳಗ್ಗೆ 7.20ಕ್ಕೆ ಮಂಗಳೂರು ತಲುಪಲಿದೆ. ಏರ್ ಇಂಡಿಯಾ 680 ವಿಮಾನ ಮಂಗಳೂರಿನಿಂದ ಬೆಳಿಗ್ಗೆ 7.55ಕ್ಕೆ ಹೊರಟು ಮುಂಬಯಿಗೆ ಬೆಳಿಗ್ಗೆ 9.35ಕ್ಕೆ ತಲುಪುತ್ತದೆ.
ಮುಂಬಯಿ ಮತ್ತು ಕರಾವಳಿ ಕರ್ನಾಟಕದ ನಡುವೆ ಶತಮಾನಗಳಿಂದ ಜನರ ಓಡಾಟವಿದೆ. ಕರಾವಳಿಯ ಅನೇಕ ಮಂದಿ ಮುಂಬಯಿಯಲ್ಲಿ ವ್ಯಾಪಾರ, ವಹಿವಾಟು, ನೌಕರಿ ಎಂದು ಬದುಕು ಕಟ್ಟಿಕೊಂಡಿದ್ದಾರೆ. ಸುಮಾರು 25 ಲಕ್ಷ ಕನ್ನಡಿಗರು ಮುಂಬಯಿ ಹಾಗೂ ಆಸುಪಾಸಿನ ನಗರಗಳಲ್ಲಿ ವಾಸವಾಗಿದ್ದು, ಈ ಪೈಕಿ ಹೆಚ್ಚಿನವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರು. ಮುಂಬಯಿ-ಮುಂಗಳೂರು ನಡುವಿನ ರೈಲು ಮತ್ತು ಬಸ್ಗಳು ನಿತ್ಯ ತುಂಬಿರುವುದೇ ಈ ಎರಡು ಭಾಗಗಳಲ್ಲಿ ಜನರ ಓಡಾಟ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿ. ಇದೀಗ ಏರ್ ಇಂಡಿಯಾ ಇನ್ನೊಂದು ವಿಮಾನ ಸೇವೆ ಆರಂಭಿಸಿರುವುದರಿಂದ ಮುಂಬಯಿಯಲ್ಲಿರುವ ಕರಾವಳಿಯವರಿಗೆ ಬಹಳ ಅನುಕೂಲ ಆಗಲಿದೆ.






























































