ವಿದ್ಯಾರ್ಥಿ ಜೀವನ ಕೇವಲ ಅಂಕ ಗಳಿಕೆಗೆ ಸೀಮಿತವಾಗದಿರಲಿ – ರಾಜೇಂದ್ರ ಭಟ್
ಹೆಬ್ರಿ : ಬದುಕಿನ ರೂಪು ರೇಷೆಯಲ್ಲಿ ವಿದ್ಯಾರ್ಥಿ ಜೀವನ ಮಹತ್ತರವಾದುದು. ಕಾಲೇಜು ವಿದ್ಯಾಭ್ಯಾಸ ಕೇವಲ ಅಂಕ ಗಳಿಕೆಗೆ ಸೀಮಿತವಾಗದಿರಲಿ. ಈ ನಿಟ್ಟಿನಲ್ಲಿ ಅಮೃತ ಭಾರತಿ ವಿದ್ಯಾಸಂಸ್ಥೆ ವಿದಾರ್ಥಿಗಳಿಗೆ ಪಠ್ಯ ಶಿಕ್ಷಣದೊಂದಿಗೆ ಸಂಸ್ಕೃತಿ, ಸಂಸ್ಕಾರ ಮತ್ತು ಸಾಧಕರ ಆದರ್ಶ ತತ್ವಗಳನ್ನು ಬೋಧಿಸುತ್ತಿರುವುದು ಶ್ಲಾಘನೀಯ ಎಂದು ರಾಷ್ಟ್ರೀಯ ಜೇಸಿ ತರಬೇತುದಾರ ರಾಜೇಂದ್ರ ಭಟ್ ಅಭಿಪ್ರಾಯಪಟ್ಟರು. ಅವರು ಜೂ. 7 ರಂದು ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಕಾಲೇಜಿನ ದ್ಯೇಯೋದ್ದೇಶಗಳು ಹಾಗೂ ನೀತಿ ನಿಯಮಗಳನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಸಿ.ಎ.ಎಮ್. ರವಿ ರಾವ್, ಕಾರ್ಯದರ್ಶಿ ಗುರುದಾಸ್ ಶೆಣೈ, ಸದಸ್ಯ ವಿಷ್ಣುಮೂರ್ತಿ ನಾಯಕ್, ಹಾಸ್ಟೆಲ್ ಕಮಿಟಿ ಸದಸ್ಯ ರಾಮಕೃಷ್ಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕ ಸುಹಾಸ್ ಶೆಟ್ಟಿ ಕಾರ್ಯಕ್ರಮ ನಿರ್ವಹಸಿದರು.





































