ಕಾನೂನು ಕಣಜ – ನ್ಯಾಯಿಕ ಪ್ರತ್ಯೇಕೀಕರಣ ಮತ್ತು ವಿಚ್ಛೇದನ

ವಿವಾಹಿತ ಗಂಡ, ಹೆಂಡತಿ ತಮ್ಮ ವಿವಾಹವನ್ನು ಸಮಾಪ್ತಿಗೊಳಿಸಿಕೊಳ್ಳದೆಯೇ ನ್ಯಾಯಾಲಯದ ಆದೇಶದ ಮೇರೆಗೆ ಪರಸ್ಪರರು ಪ್ರತ್ಯೇಕವಾಗಿ ವಾಸಿಸುವುದನ್ನು ಕಾನೂನಿನ ಪ್ರಕಾರ ನ್ಯಾಯಿಕ ಪ್ರತ್ಯೇಕೀಕರಣ (ಜ್ಯುಡೀಶಿಯಲ್ ಸೆಪರೇಶನ್) ಹಾಗೂ ವಿವಾಹಿತ ದಂಪತಿ ಪರಸ್ಪರರು ನ್ಯಾಯಾಲಯದ ಆದೇಶದ ಮೂಲಕ ತಮ್ಮ ವೈವಾಹಿಕ ಬಂಧದಿಂದ ಬಿಡುಗಡೆಗೊಳ್ಳುವುದಕ್ಕೆ ವಿವಾಹ ವಿಚ್ಛೇದನ ಎನ್ನುತ್ತಾರೆ. ನ್ಯಾಯಿಕ ಪ್ರತ್ಯೇಕೀಕರಣ ಅಥವಾ ವಿಚ್ಛೇದನ ಕೋರಿ ಅರ್ಜಿಯನ್ನು ನ್ಯಾಯಾಲಯದಲ್ಲಿ ವಿವಾಹಿತ ದಂಪತಿ ಪೈಕಿ ಗಂಡ ಅಥವಾ ಹೆಂಡತಿ ಈ ಕೆಳ ತಿಳಿಸಿದ ಒಂದು ಅಥವಾ ಹೆಚ್ಚಿನ ಕಾರಣಗಳಿಗಾಗಿ ಸಲ್ಲಿಸಬಹುದಾಗಿದೆ. ವಿವಾಹಿತ ದಂಪತಿ ಪೈಕಿ..,

1) ಹೆಂಡತಿಯು ಪರಪುರುಷನೊಂದಿಗೆ ಅಥವಾ ಗಂಡನು ಪರಸ್ತ್ರೀಯೊಂದಿಗೆ ವಿವಾಹ ಬಾಹಿರ ಸಂಬಂಧವನ್ನು ಹೊಂದಿದ್ದಲ್ಲಿ
2) ಒಬ್ಬರು ಮತ್ತೊಬ್ಬರನ್ನು ಕ್ರೂರತನದಿಂದ ನಡೆಯಿಸಿಕೊಂಡಿದ್ದಲ್ಲಿ
3) ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯವರೆಗೆ ಒಬ್ಬರು ಮತ್ತೊಬ್ಬರನ್ನು ಪರಿತ್ಯಜಿಸಿದ್ದಲ್ಲಿ
4) ವಿವಾಹಿತ ದಂಪತಿ ಪೈಕಿ ಯಾರಾದರೊಬ್ಬರು ಹಿಂದೂ ಧರ್ಮವನ್ನು ತ್ಯಜಿಸಿ ಅನ್ಯ ಧರ್ಮವನ್ನು ಸ್ವೀಕರಿಸಿದ್ದಲ್ಲಿ
5) ಯಾರಾದರೊಬ್ಬರು ಮಾನಸಿಕ ಅಸ್ವಸ್ಥತೆಯಿಂದ ಅಥವಾ ಅಂಟು ಜಾಡ್ಯವಾದ ಲೈಂಗಿಕ ರೋಗ ಅಥವಾ ಗುಣಪಡಿಸಲಾಗದ ಖಾಯಿಲೆ ಮುಂತಾದವುಗಳಿಂದ ಬಳಲುತ್ತಿದ್ದಲ್ಲಿ
6) ಯಾರಾದರೊಬ್ಬರು ಶಾಶ್ವತವಾಗಿ ಪ್ರಾಪಂಚಿಕ ಸಂಪರ್ಕವನ್ನು ತ್ಯಜಿಸಿದ್ದಲ್ಲಿ
7) ಯಾರಾದರೊಬ್ಬರು ಮತ್ತೊಬ್ಬರ ವಿರುದ್ಧ ವೈವಾಹಿಕ ಹಕ್ಕುಗಳ ಪುನರ್ ಸ್ಥಾಪನೆಗಾಗಿ ಡಿಕ್ರಿ ಪಡೆದುಕೊಂಡ ನಂತರದ ಒಂದು ವರ್ಷ ಮೀರಿದರೂ ಡಿಕ್ರಿ ಪಡೆದುಕೊಂಡ ಗಂಡ ಅಥವಾ ಹೆಂಡತಿಯ ಜೊತೆಗೆ ಮತ್ತೊಬ್ಬರು ಆ ಡಿಕ್ರಿಯನ್ವಯ ಬಾಳುವೆ ಮಾಡದಿದ್ದಲ್ಲಿ
8) ವಿವಾಹಿತ ದಂಪತಿ ಪೈಕಿ ಯಾರಾದರೊಬ್ಬರು ಏಳು ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಕಾಣೆಯಾಗಿದ್ದು ಆತನು/ ಆಕೆಯು ಜೀವಂತವಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದಲ್ಲಿ
9) ಯಾರಾದರೊಬ್ಬರು ನ್ಯಾಯಿಕ ಡಿಕ್ರಿಯನ್ನು ಪಡೆದುಕೊಂಡ ನಂತರ ಒಂದು ವರ್ಷ ವೀರಿದರೂ ದಂಪತಿ ಬಾಳುವೆ ಮಾಡದಿದ್ದಲ್ಲಿ
10) ಮದುವೆಯ ಸಮಯದಲ್ಲಿ ವರನು ಆಗಲೇ ಬೇರೊಬ್ಬಳೊಂದಿಗೆ ಮದುವೆಯಾಗಿದ್ದು ಆತಳು ಜೀವಂತವಾಗಿರುವ ವಿಷಯವನ್ನು ವರನು ವಧುವಿಗೆ ತಿಳಿಸದೇ ಬಚ್ಚಿಟ್ಟಲ್ಲಿ ಇತ್ಯಾದಿ

ವೈವಾಹಿಕ ವಿವಾದ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣವು ಜರುಗುತ್ತಿರುವಾಗ ಗಂಡನಿಗಾಗಲೀ ಅಥವಾ ಹೆಂಡತಿಗಾಗಲೀ ತನ್ನನ್ನು ತಾನು ಸಂರಕ್ಷಿಸಿಕೊಳ್ಳಲು ಮತ್ತು ಪ್ರಕರಣದ ಖರ್ಚುನ್ನು ಭರಿಸಲು ತನ್ನದೇ ಆದ ಯಾವುದೇ ಆದಾಯ ಇಲ್ಲದಿದ್ದಲ್ಲಿ ಅಂಥವರಿಗೆ ಮತ್ತೊಬ್ಬರು ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಲಯ ನಿಗದಿಗೊಳಿಸಬಹುದಾದ ಮೊತ್ತದ ಹಣವನ್ನು ಜೀವನಾಂಶಕ್ಕಾಗಿ ಮತ್ತು ಪ್ರಕರಣದ ವೆಚ್ಚಕ್ಕಾಗಿ ಕೊಡಬೇಕೆಂದು ನ್ಯಾಯಾಲಯ ಆದೇಶ ನೀಡಬಹುದು.
ನ್ಯಾಯಿಕ ಪ್ರತ್ಯೇಕೀಕರಣದ ಆದೇಶದನ್ವಯ ಗಂಡ ಹೆಂಡತಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾಗ ಹೆಂಡತಿಯು ಗಂಡನಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ.

✒️ ಕೆ. ವಿಜೇಂದ್ರ ಕುಮಾರ್, ವಕೀಲರು, ಕಾರ್ಕಳ
ಮೊ: 98452 32490/ 96116 82681



































































































































































error: Content is protected !!
Scroll to Top