ವಾಪಸು ಬಂದು ಫೈಲ್, ವಿಗ್ರಹ ಇಟ್ಟು ಹೋದ ಚಾಲಾಕಿ ಕಳ್ಳ
ಮೈಸೂರು: ಮಾಜಿ ಸಚಿವ ಕೋಟೆ ಶಿವಣ್ಣ ಅವರ ಮೈಸೂರಿನ ವಿಜಯನಗರದ ಮೂರನೇ ಹಂತದ ಮನೆಯಲ್ಲಿದ್ದ ಇನ್ನೋವಾ ಕಾರು ಕಳವಾದ ಘಟನೆ ನಡೆದಿದೆ.ಮುಖಕ್ಕೆ ಮಾಸ್ಕ್ ಹಾಕಿಕೊಂಡು ರಾಜಾರೋಷವಾಗಿ ಮನೆಗೆ ನುಗ್ಗಿದ ಕಳ್ಳರು ಮಾಜಿ ಸಚಿವರ ಮನೆಯಲ್ಲಿ ಐಷಾರಾಮಿ ಕಾರು ಕಳ್ಳತನ ಮಾಡಿದ್ದಾರೆ.
ಜೂನ್ 6ರಂದು ಮಧ್ಯರಾತ್ರಿ 1 ಗಂಟೆಯ ವೇಳೆ ಕಳ್ಳತನ ನಡೆದಿದ್ದು, ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಪೌಂಡ್ ಹಾರಿ ಬಂದು ಮನೆಗೆ ನುಗ್ಗಿದ ಕಳ್ಳರು ಕೀ ತೆಗೆದುಕೊಂಡು ಬಂದು ಕಾರನ್ನು ಓಡಿಸಿಕೊಂಡು ಹೋಗಿದ್ದಾರೆ. ಬಳಿಕ ವಾಪಸು ಬಂದು ಫೈಲ್‌ಗಳು ಹಾಗೂ ಗಣಪತಿ ವಿಗ್ರಹವನ್ನು ಇಟ್ಟು ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜೂನ್ 5 ಸಂಜೆ ಕಾರು ನಿಲ್ಲಿಸಿ ಡ್ರೈವರ್ ಕೀ ಕೊಟ್ಟು ಹೋಗಿದ್ದ. ಮಾರನೇ ದಿನ ಬೆಳಿಗ್ಗೆ ಕಾರು ನೋಡಿದರೆ ಕಾಣಲಿಲ್ಲ. ಮನೆಯವರನ್ನು ವಿಚಾರಿಸಿದರೆ ಯಾರೂ ತೆಗೆದುಕೊಂಡು ಹೋಗಿರಲಿಲ್ಲ. ಸಿಸಿಟಿವಿ ನೋಡಿದಾಗ ಮಧ್ಯರಾತ್ರಿ 1 ಗಂಟೆಗೆ ಕಾರು ಕಳ್ಳತನ ಆಗಿರೋದು ಗೊತ್ತಾಗಿದೆ. ಕಾರು ಕದ್ದವನು ಮತ್ತೆ ಬಂದು ಫೈಲ್ ಗಳು ಹಾಗೂ ಗಣಪತಿ ವಿಗ್ರಹ ಇಟ್ಟು ಹೋಗಿದ್ದಾನೆ ಎಂದು ಕಂಡು ಬಂದಿದೆ.