ಉಡುಪಿಗೆ 312 ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ 828 ಹುದ್ದೆ ಹಂಚಿಕೆ
ಬೆಂಗಳೂರು: ಶಾಲಾ ಶಿಕ್ಷಣ ಆಯುಕ್ತರ ಕಚೇರಿ 2023-24ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ತಾತ್ಕಾಲಿಕ ನೆಲೆಯಲ್ಲಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ.
ಮೇ 29ರಿಂದ ಈ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇರ ನೇಮಕಾತಿ ಮೂಲಕ ಹುದ್ದೆ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಹುದ್ದೆಗಳಿಗೆ ಎದುರಾಗಿ ತಾತ್ಕಾಲಿಕವಾಗಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ.
ಖಾಲಿ ಇರುವ ಅಗತ್ಯ ಹುದ್ದೆಗಳಿಗೆ ಮಾತ್ರ ಆದ್ಯತೆ ಮೇರೆಗೆ ಅತಿಥಿ ಶಿಕ್ಷಕರನ್ನು ತ್ವರಿತವಾಗಿ ನೇಮಕಾತಿ ಮಾಡಲು ಜಿಲ್ಲಾ ಉಪನಿರ್ದೆಶಕರು ತಾಲೂಕುವಾರು ಹುದ್ದೆಗಳ ಮರು ಹಂಚಿಕೆಯನ್ನು ಕಡ್ಡಾಯವಾಗಿ ಮಾಡಬೇಕು. ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಗೌರವ ಸಂಭಾವನೆ ದರ ಮಾಹೆಯಾನ 10,000 ರೂ. ಆಗಿರುತ್ತದೆ. 27 ಸಾವಿರ ಅತಿಥಿ ಶಿಕ್ಷಕರಲ್ಲಿ ಉಡುಪಿಗೆ 312 ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ 828, ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.