ಕಾರ್ಕಳ : ಬಾವಿಯೊಂದಕ್ಕೆ ಬಿದ್ದಿದ್ದ ಜಿಂಕೆಯನ್ನು ಅರಣ್ಯ ಇಲಾಖಾ ಸಿಬ್ಬಂದಿ ರಕ್ಷಿಸಿದ ಘಟನೆ ಮೇ 24 ರಂದು ಪಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಜಮೆರೊಟ್ಟು ಮನೆಯ ಬಾವಿಗೆ ಮುಂಜಾನೆ ಜಿಂಕೆಯೊಂದು ಬಿದ್ದಿದ್ದು, ಬೆಳಿಗ್ಗೆ ಬಾವಿಯ ನೀರು ಕೆಸರಾಗಿರುವುದನ್ನು ಗಮನಿಸಿದಾಗ ಜಿಂಕೆ ಬಾವಿಗೆ ಬಿದ್ದಿರುವುದು ಗಮನಕ್ಕೆ ಬಂದಿರುತ್ತದೆ. ತಕ್ಷಣವೇ ಕಾರ್ಕಳ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖಾ ಸಿಬ್ಬಂದಿ ಜಿಂಕೆಯನ್ನು ಜೀವಂತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಡಿಗೆ ಮರಳಿದ ಜಿಂಕೆ
ಬಾವಿಯಿಂದ ಜಿಂಕೆಯನ್ನು ಮೇಲೆಕ್ಕೆತ್ತಿ ಸಿಬ್ಬಂದಿ ಬಲೆಯಿಂದ ಹೊರೆತೆಗೆಯುವ ವೇಳೆಗಾಗಲೇ ಜಿಂಕೆಯು ಕೈ ತಪ್ಪಿ ಸುರಕ್ಷಿತವಾಗಿ ಕಾಡಿಗೆ ಓಡಿದೆ. ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಜಿಂಕೆಯ ಪ್ರಾಣಕ್ಕೆ ಯಾವುದೇ ಅಪಾಯ ಉಂಟಾಗಿಲ್ಲ ಎನ್ನಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಓ ಜಯರಾಮ್ ಪೂಜಾರಿ, ಕಣಂಜಾರು ಗಸ್ತು ಅರಣ್ಯ ಪಾಲಕ ಶ್ರೀಧರ್ ನರೇಗಲ್ಲು, ಅರಣ್ಯ ವೀಕ್ಷಕ ಸಂಜೀವ ಪರವ, ನಿವೃತ್ತ ಫಾರೆಸ್ಟ್ ಗಾರ್ಡ್ ಪೊನಪ್ಪ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.






























































