ಹೆಬ್ರಿ : ವಿದ್ಯಾಭಾರತಿಯು ವ್ಯಕ್ತಿಯಿಂದ ಸಮಾಜ, ಸಮಾಜದಿಂದ ರಾಷ್ಟ್ರ ನಿರ್ಮಾಣದ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದೆ. ಭಾರತವು ಜಗದ್ಗುರುವಾಗುವಲ್ಲಿ ಸಂಸ್ಕಾರಯುತವಾದ ಶಿಕ್ಷಣದ ಪಾತ್ರ ಮಹತ್ವವಾದದು. ಈ ನಿಟ್ಟಿನಲ್ಲಿ ವಿದ್ಯಾಭಾರತಿಯು ಶಿಕ್ಷಕರಿಗೆ ಶಿಬಿರ ಆಯೋಜಿಸಿರುವುದು ಅಭಿನಂದನಾರ್ಹ ಎಂದು ಅಮೃತ ಭಾರತಿ ಟ್ರಸ್ಟ್‌ನ ಕಾರ್ಯದರ್ಶಿ ಗುರುದಾಸ್ ಶೆಣೈ ಅಭಿಪ್ರಾಯಪಟ್ಟರು. ಅವರು ಗುರುವಾರದಂದು ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಆಯೋಜಿಸಿದ ಹತ್ತು ದಿನಗಳ ವಿದ್ಯಾವಿಕಾಸ ಶಿಬಿರ ಮತ್ತು ಶಿಶುವಾಟಿಕಾ ಆಚಾರ್ಯ ಪ್ರಶಿಕ್ಷಣ ವರ್ಗದ ಸಮರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾಭಾರತಿ ದಕ್ಷಿಣ ಕ್ಷೇತ್ರದ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಜಿ. ಆರ್ ಜಗದೀಶ್ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಗನುಗುಣವಾಗಿ ಶಿಕ್ಷಕರು ವ್ಯಕ್ತಿಗತವಾಗಿ ಪರಿಪಕ್ವತೆ ಹೊಂದಿ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ರಾಮರಾಜ್ಯದ ಕನಸು ನನಸು ಮಾಡಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾಭಾರತಿ ಕರ್ನಾಟಕದ ಕಾರ್ಯದರ್ಶಿ ವಸಂತ ಮಾಧವ ಮತ್ತು ಶಿಶುವಾಟಿಕಾ ಶಿಕ್ಷಣ ಪ್ರಮುಖ್ ತಾರಾ, ಸ್ವರ್ಣಾ, ಉಮೇಶ್, ರಾಮಕೃಷ್ಣ, ಅಮೃತ ಭಾರತಿ ಟ್ರಸ್ಟ್‌ನ ಬಾಲಕೃಷ್ಣ ಮಲ್ಯ, ರಾಮಕೃಷ್ಣ ಆಚಾರ್ಯ, ವಿಷ್ಣುಮೂರ್ತಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಶಿಬಿರಾರ್ಥಿ ರೇಷ್ಮಾ ಸ್ವಾಗತಿಸಿ, ಸುಮನಾ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ ವಿವಿಧ ಜಿಲ್ಲೆಗಳಿಂದ ಒಟ್ಟು 251 ಶಿಕ್ಷಕರು ಭಾಗವಹಿಸಿದ್ದರು.





































































