ಪುಂಜಾಲಕಟ್ಟೆ ಬಾಂಬಿಲದಲ್ಲಿ ಸಂಭವಿಸಿದ ಅಪಘಾತ
ಪುಂಜಾಲಕಟ್ಟೆ : ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದು ಸವಾರ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಬಾಂಬಿಲದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಸ್ಕೂಟಿ ಸವಾರ, ಅಮ್ಟಾಡಿ ನಿವಾಸಿ ಸಂದೀಪ್ ಲೋಬೊ (35) ಮೃತಪಟ್ಟವರು. ಅವರ ನೆರೆಮನೆಯ ಆಕಾಶ್ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಿಬ್ಬರು ವೆಲ್ಡಿಂಗ್ ಕೆಲಸ ಮಾಡುವ ಕಾರ್ಮಿಕರಾಗಿದ್ದು, ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ರಿಟ್ಜ್ ಕಾರು ಢಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ಸಂದೀಪ್ ಲೋಬೊ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದ್ದು, ಆಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುಂಜಾಲಕಟ್ಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
































































