ಕಾರ್ಕಳದಲ್ಲಿ ಫೋನ್‌ ಕರೆಯದ್ದೆ ಸದ್ದು

ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ವೈರಲ್‌

ಕಾರ್ಕಳ : ಕಳೆದ ಒಂದು ತಿಂಗಳಿನಿಂದ ಕಾರ್ಕಳದಲ್ಲಿ ಚುನಾವಣಾ ಪ್ರಚಾರವು ಹೊಸ ಹೊಸ ರೂಪವನ್ನು ಪಡೆಯುತ್ತಿದೆ. ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿಯಿದ್ದು, ಮತದಾರರನ್ನು ತಮ್ಮತ್ತ ಸೆಳೆಯಲು ವಿನೂತನ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಪ್ರತಿ ನಿತ್ಯವೂ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಒಂದಲ್ಲ ಒಂದು ವಿಚಾರ ಸದ್ದು ಮಾಡುತ್ತಲೇ ಇದೆ. ಇದೀಗ ಕಳೆದ ಎರಡು ವಾರದಿಂದ ಕಾರ್ಕಳದೆಲ್ಲೆಡೆ ಫೋನ್‌ ಕರೆಯದ್ದೆ ಹಾವಳಿ. ಯಾವುದಾದರೂ ಅನ್‌ನೌನ್‌ ನಂಬರಿನಿಂದ ಕರೆ ಬಂದಾಗ ಇದು ಪಕ್ಷದ ಕರೆಯೇ ಎನ್ನುವಷ್ಟರ ಮಟ್ಟಿಗೆ ಕಾರ್ಕಳದಲ್ಲಿ ಪಕ್ಷದಿಂದ ಬರುವ ಫೋನ್‌ ಕರೆ ಸದ್ದು ಮಾಡುತ್ತಿದೆ.

ನಮ್ಮ ಅಭ್ಯರ್ಥಿಗೆ ಈ ಬಾರಿ ಮತ ಹಾಕಿ ಗೆಲ್ಲಿಸಿ ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದಿಂದ ಕ್ಷೇತ್ರದ ಮತದಾರರಿಗೆ ಕರೆ ಬರುತ್ತಿದೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಮತ ಹಾಕಿ ಬೆಂಬಲಿಸಿ ಎಂಬ ಮಾತಿನೊಂದಿಗೆ ಆರಂಭವಾಗುವ ಈ ಕರೆಯಲ್ಲಿ ನಂತರ ಪಕ್ಷದ ಕಾರ್ಯಚಟುವಟಿಕೆಗಳು, ಅಭ್ಯರ್ಥಿಯ ಕಾರ್ಯವೈಖರಿ, ಭರವಸೆ, ಜನರ ಬೇಡಿಕೆ, ಸಮಸ್ಯೆಗಳ ಕುರಿತಾದ ಮಾತುಕತೆಯೂ ನಡೆಯುವ ಸಾಧ್ಯತೆಯಿದೆ.

ಆಕ್ರೋಶ ವ್ಯಕ್ತಪಡಿಸಿದ ಜನ
ಕರೆ ಸ್ವೀಕರಿಸಿದ ಜನರಲ್ಲಿ ಕೆಲವರು ಬರೀ ಮಾತುಗಳನ್ನು ಆಲಿಸಿ ಸುಮ್ಮನಾಗಿದ್ದಾರೆ. ಇನ್ನು ಪಕ್ಷದ ಬಗ್ಗೆ ಹಾಗೂ ಅಭ್ಯರ್ಥಿಯ ಕುರಿತು ಅಸಮಾಧಾನ ಇದ್ದವರು ಫೋನ್‌ ಕರೆಗೆ ಆಕ್ರೋಶ ವ್ಯಕ್ತಪಡಿಸಿದ ಸನ್ನಿವೇಶಗಳು ಇವೆ. ಈ ಸಂದರ್ಭ ಪಕ್ಷದಿಂದ ಅಥವ ಅಭ್ಯರ್ಥಿಯಿಂದ ತಮಗಾದ ನಿರಾಶೆ, ನೋವು ಹಾಗೂ ಗ್ರಾಮದ ಸಮಸ್ಯೆಯ ಕುರಿತು ಮತದಾರರು ಏರು ಧ್ವನಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಆಡಿಯೋ ವೈರಲ್‌
ಎರಡು ಪಕ್ಷಗಳಿಂದ ಈ ರೀತಿಯ ಫೋನ್‌ ಕರೆಗಳು ಬರುತ್ತಿದ್ದು, ಕೆಲವರು ತಮ್ಮ ಕರೆಯನ್ನು ರೆಕಾರ್ಡ್‌ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ವಾಟ್ಸಾಪ್‌ನಲ್ಲಂತೂ ಇಂತಹ ಆಡಿಯೋಗಳು ಎಷ್ಟು ಬಾರಿ ಫಾವರ್ಡ್‌ ಆಗಿದೆ ಎಂದು ಹೇಳಲೂ ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಇದೊಂದು ರೀತಿ ಎಂಟರ್‌ಟೈನ್‌ಮೆಂಟ್‌ ಪ್ರೋಗ್ರಾಂನಂತಾಗಿದೆ. ಇನ್ನೂ ಕೆಲವರೂ ಸುಮ್ಮನೆ ಪ್ರಚಾರ ಗಿಟ್ಟಿಸಿಕೊಳ್ಳಲು ಆಡಿಯೋ ರೆಕಾರ್ಡ್‌ ಮಾಡಿ ವೈರಲ್‌ ಮಾಡುವವರೂ ಇದ್ದಾರೆ.

ಕಾರ್ಕಳ ಕ್ಷೇತ್ರದಲ್ಲಿ ಈ ರೀತಿಯ ಹೊಸ ಪ್ರಯತ್ನ ಒಂದೊಳ್ಳೆ ಪ್ರಚಾರ ವಿಧಾನ ಎಂಬ ಅಭಿಪ್ರಾಯಗಳು ಮತದಾರರಲ್ಲಿ ಇದೆ. ಕರೆ ಕೇವಲ ರೆಕಾರ್ಡಿಂಗ್‌ ಧ್ವನಿಯನ್ನು ಹೊಂದಿರದೆ ಮತದಾರರ ಪ್ರತಿಕ್ರಿಯೆಗೂ ಅವಕಾಶವಿರುವುದರಿಂದ ಜನತೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗಿದೆ. ಇನ್ನೂ ಇದರಿಂದಾಗಿ ಪಕ್ಷದ ಪ್ರಚಾರದ ಜೊತೆಗೆ ಪಕ್ಷ ಹಾಗೂ ಅಭ್ಯರ್ಥಿಯ ಬಗ್ಗೆ ಜನರ ಅಭಿಪ್ರಾಯ ಏನು ಎಂಬುದನ್ನು ಪಕ್ಷ ಸಮೀಕ್ಷೆ ನಡೆಸಿದಂತಾಗುತ್ತದೆ. ಆದರೆ ಒಬ್ಬ ಮತದಾರನಿಗೆ ಒಂದೆರಡು ಕರೆಗಿಂತಲೂ ಅಧಿಕ ಬಾರಿ ಫೋನ್‌ ಕರೆ ಬರುತ್ತಿರುವುದು ಕಿರಿಕಿರಿ ಉಂಟು ಮಾಡುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವರದಿ : ನಳಿನಿ ಎಸ್.‌ ಸುವರ್ಣ





































































































































error: Content is protected !!
Scroll to Top